ಬೆಂಗಳೂರು, ಅ 15 (Daijiworld News/MSP): ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇನ್ನೂ ನಡೆದಿಲ್ಲ. ಪ್ರವಾಹದ ಸಂದರ್ಭ ಏಕಾಂಗಿ ರಾಜ್ಯದೆಲ್ಲೆಡೆ ಓಡಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ವಿಚಾರವಾಗಿ ಗುರುವಾರ ಸಂಜೆ ದೆಹಲಿಯ ವಿಮಾನ ಏರಲಿದ್ದಾರೆ.
ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆ ಹಾಗೂ ಪ್ರವಾಹ ಪೀಡಿತದ ಬಗ್ಗೆ ಕೇಂದ್ರ ಸರ್ಕಾರದ ವತಿಯಿಂದ ಪರಿಹಾರ ನೀಡುವ ಬಗ್ಗೆ ಚರ್ಚಿಸಲೆಂದು ಗುರುವಾರ ರಾತ್ರಿ 9 ಗಂಟೆಯ ವಿಮಾನದಲ್ಲಿ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದು, ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯಡಿಯೂರಪ್ಪ ಭೇಟಿಯಾಗಲಿದ್ದು, ಈ ಸಂದರ್ಭ ರಾಜ್ಯದಲ್ಲಿ ಉಂಟಾದ ಪ್ರವಾಹ, ಹಾಗೂ ಪ್ರಾಕೃತಿಕ ಅವಘಡಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿಯೊಂದಿಗೆ ಮಾತುಕತೆಯ ಬಳಿಕ ಮಧ್ಯಾಹ್ನ ಕೇಂದ್ರ ರೈಲ್ವೆ ಸಚಿವ ಹಾಗೂ ಸೇರಿದಂತೆ ಕೇಂದ್ರ ಸಂಪುಟದ ಹಲವು ಸಚಿವರನ್ನು ಭೇಟಿಯಾಗಲಿದ್ದಾರೆ. ಇನ್ನು ಶನಿವಾರ ಅಂದರೆ ಆ.17 ರಂದು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಕುರಿತಂತೆ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿಯಾಗಿ ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಆ ಬಳಿಕ ಅಂದೇ ರಾತ್ರಿ ಯಡಿಯೂರಪ್ಪ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.