ಅಂಬ್ಯುಲೆನ್ಸ್ಗೆ ದಾರಿ ತೋರಿದ 12 ರ ಪೋರನಿಗೆ ದೊರೆಯಿತು ಶೌರ್ಯ ಪ್ರಶಸ್ತಿಯ ಗೌರವ
Thu, Aug 15 2019 01:45:04 PM
ರಾಯಚೂರು,ಆ 15 (Daijiworld News/RD): ಹೆಚ್ಚುತ್ತಿರುವ ನೀರಿನ ಭೀತಿ, ಭಾಗಶಃ ಮುಳುಗಿರುವ ಸೇತುವೆ, ಈ ಸೇತುವೆಯಲ್ಲಿ ನೀರಿನ ಏರಿಕೆಗೆ ಸ್ಥಗಿತಗೊಂಡ 6 ಮಂದಿ ಮಕ್ಕಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್, ಸೈರನ್ ಹೊಡೆಯುತ್ತಿದ್ದು, ಇದನ್ನು ಗಮನಿಸಿದ 12 ವರ್ಷದ ವೆಂಕಟೇಶ್, ತನ್ನ ಪ್ರಾಣದ ಹಂಗನ್ನು ತೊರೆದು ಅಂಬ್ಯಲೆನ್ಸ್ ಗೆ ದಾರಿ ತೋರಿಸಿ, ಇನ್ನೊಂದು ಭಾಗಕ್ಕೆ ತಲುಪಿಸುವ ಮೂಲಕ ಅಪ್ರತಿಮ ಸಾಧನೆಗೈದಿದ್ದು, ಈತನ ಈ ಸಾಧನೆಗೆ ಸರಕಾರ ಶೌರ್ಯ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.
ಸೇತುವೆಯಲ್ಲಿ ಪ್ರವಾಹದ ಭೀತಿ ಒಂದು ಕಡೆ 6 ಜೀವಗಳನ್ನು ಹೊತ್ತು ಸಾಗಿಸುತ್ತಿರುವ ಅಂಬ್ಯುಲೆನ್ಸ್, ನೀರಿನ ರಭಸಕ್ಕೆ ಸಿಲುಕಿ ಸೇತುವೆ ದಾಟದೆ ಅಸಾಯಕತೆಯಿಂದ ಸೈರನ್ ಮಾಡುತ್ತಿದ್ದು, ಇದನ್ನು ಗಮನಿಸುತ್ತಾ ನೋಡುತ್ತ ನಿಂತ ಅಲ್ಲಿನ ಜನ, ಹೀಗಿರುವಾಗ 12ವರ್ಷದ ಪುಟ್ಟ ಬಾಲಕ ವೆಂಕಟೇಶ್ ಇದನ್ನು ನೋಡಿ ಹೇಗಾದರೂ ಮಾಡಿ ಅಂಬ್ಯಲೆನ್ಸ್ ಸುರಕ್ಷಿತವಾಗಿ ಅತ್ತ ಕಡೆ ಸಾಗಬೇಕೆಂದು ಅಲೋಚಿಸಿ, ತನ್ನ ಜೀವವನ್ನು ಪಣಕಿಟ್ಟು ಇತರರ ಜೀವ ಉಳಿಸಿ, ಜೀವರಕ್ಷಕನಾಗಿದ್ದಾನೆ.
ನೀರಿನ ಮಟ್ಟ ಹೆಚ್ಚಿದ ಕಾರಣ ಸೇತುವೆ ದಾಟಲಾಗದೆ ಅಲ್ಲೇ ಅಂಬ್ಯುಲೆನ್ಸ್ ಸ್ಥಗಿತಗೊಂಡಿತ್ತು, ಇದನ್ನು ಗಮನಿಸಿದ ಆತ ಡ್ರೈವರ್ ಬಳಿ ಹೋಗಿ, ನಾನು ಮುಂದೆ ಹೋಗುತ್ತೇನೆ. ಆ ವೇಳೆ ನೀವು ಸೇತುವೆಯಲ್ಲಿ ನೀರೆಷ್ಟಿದೆ ಎಂಬುದನ್ನುತಿಳಿದುಕೊಳ್ಳಿ ಎಂದು ಹೇಳಿ ಮುಳುಗಿರುವ ಸೇತುವೆಯಲ್ಲಿ ನಡೆಯಲಾರಂಭಿಸಿ, ನಂತರ ನೀರಿನ ಆಳವನ್ನು ಗಮನಿಸಿ ಆತನನ್ನು ಹಿಂಬಾಲಿಸಿದ ಅಂಬ್ಯುಲೆನ್ಸ್ ಚಾಲಕ, ಸುರಕ್ಷಿತವಾಗಿ ಸೇತುವೆಯ ಇನ್ನೊಂದು ಭಾಗಕ್ಕೆ ತಲುಪುವಲ್ಲಿ ಯಶಸ್ವಿಯಾಯಿತು.
ಹೀಗೆ ನೀರಿನಲ್ಲಿ ಸಾಗುವಾಗ ಒಂದು ಕಡೆ ನನ್ನ ಎದೆಯ ಎತ್ತರಕ್ಕೆ ನೀರು ಬಂತು. ಆಗ ನನಗೆ ಭಯ ಆಯಿತು, ಈಜು ಗೊತ್ತಿದ್ದರಿಂದ ವಿಶ್ವಾಸದಿಂದ ಮುನ್ನುಗಿದೆ. ಹೀಗಾಗಿ ಅಂಬ್ಯುಲೆನ್ಸ್ ಸುರಕ್ಷಿತವಾಗಿ ಸಾಗಲು ಸಾಧ್ಯವಾಯಿತು ಎಂದು ವೆಂಕಟೇಶ್ ತನ್ನ ಅನುಭವ ಹಂಚಿಕೊಂಡಿದ್ದಾನೆ. ಘಟನೆಯನ್ನು ವೆಂಕಟೇಶ್ ವಿವರಿಸಿದ್ದಾನೆ.
ಈ ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದ್ದು ಅನೇಕ ಮಂದಿ ಈ ಘಟನೆಯನ್ನು ವೀಕ್ಷಿಸುತ್ತಿದ್ದರೆ ಹೊರತು ಯಾರೊಬ್ಬರು ಸಹಾಯಕ್ಕೆ ಧಾವಿಸಿಲ್ಲ, ಆದರೆ ವೆಂಕಟೇಶ್ ತನ್ನ ಜೀವವನ್ನೇ ಪಣಕ್ಕಿಟ್ಟು, ಅಂಬ್ಯುಲೆನ್ಸ್ನಲ್ಲಿ ಇದ್ದವರ ಜೀವ ಕಾಪಾಡಿದ್ದಾನೆ. ಈತನ ಕಾರ್ಯ ಮಹತ್ವವೇ ಸರಿ. ಈತನ ಈ ಸಾಧನೆಗೆ ಈಗ ಎಲ್ಲಾ ಕಡೆಯಿಂದ ಅಭಿನಂದನೆಯ ಮಹಾಪೂರ ದೊರೆಯುತ್ತಿದೆ.