ಕಾಶ್ಮೀರ, ಅ 15 (Daijiworld News/MSP): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಮೊದಲ ಸ್ವಾತಂತ್ರ್ಯೋತ್ಸವವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಶ್ರೀನಗರದ ಶೇರ್ ಎ ಕಾಶ್ಮೀರ್ ಕ್ರೀಡಾಂಗಣದಲ್ಲಿ 370ನೇ ವಿಧಿಯ ರದ್ದಿನ ಬಳಿಕದ ಮೊದಲ ಧ್ವಜಾರೋಹಣ ಮಾಡಿದರು.
ಆ ಬಳಿಕ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಆಚರಿಸುತ್ತಿರುವ ಮೊದಲ ಸ್ವಾತಂತ್ರ್ಯ ದಿನಾಚರಣೆ ಇದಾಗಿದೆ. ವಿಶೇಷ ಸ್ಥಾನಮಾನವನ್ನು ಕೈಬಿಟ್ಟ ನಂತರ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಶ್ಲಾಘನೀಯ. ಇದು ಇನ್ನು ರಾಜ್ಯದ ಜನತೆಯನ್ನು ತಮ್ಮ ಅಸ್ಥಿತ್ವದ ಕುರಿತು ಚಿಂತಿಸದಂತೆ ಮಾಡಿದೆ.
ಇಲ್ಲಿನ ಯುವಕರ ದಾರಿ ತಪ್ಪಿಸಿ ಭಯೋತ್ಪಾದಕರ ನೇಮಕಾತಿಯಲ್ಲಿ ದುಷ್ಟ ಶಕ್ತಿಗಳು ಬಳಸಿಕೊಳ್ಳುತ್ತಿತ್ತು. ಇದರ ಸಂಖ್ಯೆ ಗಣನೀಯ ಕುಸಿತ ಕಂಡಿದೆ. ರಾಜ್ಯದಲ್ಲಿ ಉಗ್ರರನ್ನು ಮಟ್ಟಹಾಕಲಾಗುತ್ತಿದೆ. ಸೈನಿಕ ನಿರಂತರ ಪ್ರಯತ್ನದಿಂದ ಉಗ್ರರನ್ನು ಮಂಡಿಯೂರುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಉಗ್ರ ಸಂಘಟನೆಗಳಿಗೆ ಸೇರುವವರ ಪ್ರಮಾಣ ಮತ್ತು ಶುಕ್ರವಾರ ಪ್ರಾರ್ಥನೆಯ ನಂತರ ಕಲ್ಲು ತೂರಾಟದ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ ಎಂದು ತಿಳಿಸಿದರು.