ಬೆಂಗಳೂರು, ಆ.15(Daijiworld News/SS): ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದಲ್ಲಿ ಅಫೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದಂತೆ ಭಾಸವಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಿಂದ ದೇಶವನ್ನು ಹೊರತರು ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ವರ್ಷಾನುಗಟ್ಟಲೆ ಸೆರೆವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಎಲ್ಲ ಹುತಾತ್ಮರನ್ನು ಸ್ಮರಿಸುತ್ತಾ ದೇಶದ ಐಕ್ಯತೆ, ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಜೊತೆಗೆ ಜಾತ್ಯಾತೀತ ಹಾಗೂ ಪರಧರ್ಮ ಸಹಿಷ್ಣು ಮನೋಭಾವನೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ. ಆಗ ಮಾತ್ರ ನಮಗೆ ದೊರೆತ ಸ್ವತಂತ್ರ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.