ಹೊಸದಿಲ್ಲಿ, ಆ.16(Daijiworld News/SS): ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಯೋಧರು ಉದ್ಧಟತನ ತೋರಿದ್ದು, ಮೂವರು ಪಾಕ್ ಯೋಧರನ್ನು ಹತ್ಯೆ ಮಾಡಲಾಗಿದೆ.
ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉರಿ ಮತ್ತು ರಾಜೌರಿ ಪ್ರಾಂತ್ಯದಲ್ಲಿ ಪಾಕಿಸ್ತಾನ ಯೋಧರು ಭಾರತೀಯ ಯೋಧರನ್ನು, ನಾಗರಿಕರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಇದಕ್ಕೆ ತಕ್ಕ ಶಾಸ್ತಿ ಮಾಡಲು ಭಾರತೀಯ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಪಾಕ್ ಯೋಧರು ಮೃತಪಟ್ಟಿದ್ದಾರೆ.
ಈ ನಡುವೆ ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಇದನ್ನು ತಳ್ಳಿಹಾಕಿರುವ ಭಾರತೀಯ ಸೇನೆ, ನಮ್ಮವರು ಯಾರಿಗೂ ಸಣ್ಣ ಗಾಯ ಕೂಡ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಎಲ್'ಒಸಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸುತ್ತಿರುವುದು ನಿಜ. ಆದರೆ ಇದಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದ್ದು, ಭಾರತೀಯ ವಲಯದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.