ಚೆನ್ನೈ, ಆ.16(Daijiworld News/SS): ಚಂದ್ರಯಾನ-2ರ ಯಶಸ್ವಿ ಉಡಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತೀಯ ಬಾಹ್ಯಾಕಾಶ ಸಂಸೋಧನೆ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ. ಶಿವನ್ ಅವರನ್ನು ತಮಿಳುನಾಡು ಸರ್ಕಾರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಚಂದ್ರಯಾನ-2 ಸೇರಿದಂತೆ ದೇಶದ ಪ್ರಮುಖ ಬಾಹ್ಯಾಕಾಶ ಯೋಜನೆಗಳಲ್ಲಿ ಕೆ. ಶಿವನ್ ಅವರ ಕೊಡುಗೆ ಗಣನೀಯವಾಗಿದೆ. ತಮಿಳುನಾಡು ಸರ್ಕಾರ ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಧನೆ, ವಿದ್ಯಾರ್ಥಿಗಳ ಕ್ಷೇಮಪಾಲನೆ ಮತ್ತು ಮಾನವಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರಿಗೆ ಈ ಪ್ರಶಸ್ತಿ ನೀಡುತ್ತದೆ. 5 ಲಕ್ಷ ರೂ. ನಗದು, 8 ಗ್ರಾಂ ಚಿನ್ನದ ಪದಕ, ಫಲಕ ಒಳಗೊಂಡಿದೆ.
ಸ್ವಾತಂತ್ಯ ದಿನದಂದು ಈ ಪ್ರಶಸ್ತಿಯನ್ನು ಶಿವನ್ ಅವರಿಗೆ ಪ್ರದಾನ ಮಾಡಬೇಕಾಗಿತ್ತು. ಆದರೆ ಶಿವನ್ ನಿಗದಿತ ಕಾರ್ಯಕ್ರಮಗಳಲ್ಲಿ ಇರುವುದರಿಂದ ಶೀಘ್ರವೇ ಅವರಿಗೆ ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.