ಕಲಬುರಗಿ, ಆ.16(Daijiworld News/SS): ನೆರೆಹಾವಳಿಯಂತಹ ಸಂದರ್ಭದಲ್ಲಿ ಒಬ್ಬ ಸಿಎಂ ಎಲ್ಲವನ್ನೂ ಗಮನ ಹರಿಸಲು ಸಾಧ್ಯವಿಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಇತ್ತ ಗಮನಹರಿಸಿ ತಕ್ಷಣವೇ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಜಿಲ್ಲೆಗಳ ಜನ ಪ್ರವಾಹದಿಂದ ಇನ್ನು ಕೆಲ ಜಿಲ್ಲೆಗಳ ಜನ ಬರದಿಂದ ಕಂಗೆಟ್ಟಿದ್ದಾರೆ. ರಾಜ್ಯದಲ್ಲಿ ನೆರೆ ಹಾವಳಿಯಿಂದ ಊಹಿಸಲಾಗದಷ್ಟು ಹಾನಿಯಾಗಿದೆ. ಮನೆ- ಮಠ ,ಬೆಳೆ ಕಳೆದುಕೊಂಡು ಜನ ಕಂಗಾಲಾಗಿದ್ದರಿಂದ ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಖರ್ಗೆ ಆಗ್ರಹಿಸಿದರು.
ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿಯವರು ದೊಡ್ಡದಾಗಿ ಮಾತಾಡುತ್ತಾರೆ. ಸರಕಾರದಲ್ಲಿ ಹೊಂದಾಣಿಕೆ ಇದ್ದಂತಿಲ್ಲವೋ ಅಥವಾ ಬೇರೆಯವರನ್ನು ತೆಗೆದುಕೊಂಡು ಹೋಗಲು ಅವರಿಂದ ಆಗುತ್ತಿಲ್ಲವೋ ಗೊತ್ತಿಲ್ಲ. ಎಂತಹ ಕಠಿಣ ಸಂದರ್ಭದಲ್ಲಿಯೂ ಈ ತರದ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಬಿಜೆಪಿಯ ರಾಜ್ಯದಲ್ಲಿ ಈ ಬಾರಿ ಇಂತಹ ಪರಿಸ್ಥಿತಿ ನಿರ್ಮಿಸಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾಗ್ಯೂ ಮಂತ್ರಿಗಳಿಲ್ಲದೆ ಅಧಿಕಾರಿಗಳ ಮೂಲಕ ಧ್ವಜಾರೋಹಣ ನಡೆದಿದ್ದು ಇದು ಮೊದಲ ಬಾರಿ. ಜನಪ್ರತಿನಿಧಿಗಳು ಧ್ವಜಾರೋಹಣ ಮಾಡದೆ ಅಧಿಕಾರಿಗಳಿಗೆ ನೀಡುವಂತಾಗಿರುವುದು ಪ್ರಜಾಪ್ರಭುತ್ವಕ್ಕೆ ಆಗಿರುವ ದೊಡ್ಡ ಅವಮಾನ ಎಂದು ಹೇಳಿದರು.