ಬೆಂಗಳೂರು, ಆ 16 (Daijiworld News/MSP): ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ಉಂಟಾಗಿದ್ದು ಕೇಂದ್ರ ಸರ್ಕಾರ ಇಂದಾದರೂ 5000 ಕೋಟಿ ರೂ. ಹಣ ಬಿಡುಗಡೆಗೊಳಿಸಬಹುದೇ ಎಂದು ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
" ಯಡಿಯೂರಪ್ಪನವರೇ, ಎಲ್ಲಿದೆ ಸರ್ಕಾರ? ಸಚಿವರುಗಳಿಲ್ಲದೆ ಹೇಗೆ ಆಡಳಿತ ನಡೆಸುತ್ತೀರ? ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಅಷ್ಟು ಆತುರ ತೋರಿದ ರಾಜ್ಯಪಾಲರು ಈಗೆಲ್ಲಿ? ಆಪರೇಷನ್ನಿಗೆ ತೋರಿದ ಉತ್ಸಾಹ ಈಗೆಲ್ಲಿ ಉಡುಗಿಹೊಯಿತು?
ಎಲ್ಲಿ ಕೇಂದ್ರದ ನಕಲಿ ಚೌಕಿದಾರರು? ಇಂದಾದರೂ ಕೇಂದ್ರವು ಈ ನೆರೆ ಪರಿಹಾರಕ್ಕೆ 5000ಕೋಟಿ ಬಿಡುಗಡೆಗೊಳಿಸುವರೇನು? ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಟ್ವೀಟ್ ಮೂಲಕ ಕಾಂಗ್ರೆಸ್ ತಿವಿದಿದೆ.
ಕರ್ನಾಟಕದ ಬಹಳಷ್ಟು ಪ್ರದೇಶಗಳು ನೆರೆಗೆ ತುತ್ತಾದ ಬಳಿಕ, ಕಾಂಗ್ರೆಸ್ ಪಕ್ಷವೂ " ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ನೆರೆ ವೀಕ್ಷಣೆಗೆ ಬಂದಿಲ್ಲ. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿಲ್ಲ. 5000 ಕೋಟಿ ರೂ. ಹಣ ಬಿಡುಗಡೆ ಮಾಡಿಲ್ಲ" ಎಂದು ಹಲವು ಬಾರಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು.
ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಜತೆ ಚರ್ಚಿಸಿ ಸಂಪುಟ ರಚನೆಯ ಬಗ್ಗೆ ಅಂತಿಮ ನಿರ್ಧಾರ ತಳೆಯುವ ಸಾಧ್ಯತೆ ಇದೆ.