ಚಾಮರಾಜನಗರ,ಆ.16 (Daijiworld News/RD): ಆರ್ಥಿಕವಾಗಿ ಹಣಕಾಸಿನಿಂದ ಕಂಗೆಟ್ಟಿದ ಒಂದೇ ಕುಟುಂಬದ ಐವರು ಸದಸ್ಯರನ್ನು ಗುಂಡಿಕ್ಕಿ ಕೊಂದು ಬಳಿಕ ತನಗೆ ತಾನೇ ಗುಂಡು ಹಾರಿಸಿ ಸಾಮೂಹಿಕವಾಗಿ ಆತ್ಮಹತ್ಯಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಮೃತಪಟ್ಟವರು ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿದ್ದು, ಓಂ ಪ್ರಕಾಶ್ (36) ಪತ್ನಿ ನಿಖಿತಾ(30), ಮಗ ಆರ್ಯ ಕೃಷ್ಣ(4) , ತಾಯಿ ಹೇಮಲತಾ (60), ತಂದೆ ನಾಗರಾಜು ಭಟ್ಟಾಚಾರ್ಯ (65) ಎಂದು ಗುರುತಿಸಲಾಗಿದೆ.
ತುಮಕೂರು ಮೂಲದ, ಓಂ ಪ್ರಕಾಶ್ ಮೈಸೂರಿನ ದಟ್ಟಗಳ್ಳಿಯಲ್ಲಿ ಮನೆ ಮಾಡಿಕೊಂಡು ಅನಿಮೇಶನ್ ಸಂಸ್ಥೆ ನಡೆಸುತ್ತಿದ್ದರು . ಪತ್ನಿ ನಿಖಿತಾ 8 ತಿಂಗಳ ಗರ್ಭಿಣಿಯಾಗಿದ್ದು, ತಂದೆ, ತಾಯಿ ಹಾಗೂ ಮಗನ ಜೊತೆ ನಿನ್ನೆ ರಾತ್ರಿ ಮೈಸೂರಿನ ಸಟ್ಟಗಳ್ಳಿಯಿಂದ ಗುಂಡ್ಲಪೇಟೆಗೆ ಬಂದಿದ್ದು, ನಂತರ ನಂದಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ರಾತ್ರೀ ಅಲ್ಲಿಯೇ ವಾಸ್ತವ ಹೂಡಿದ್ದರು. ತಡರಾತ್ರಿ 2 ಗಂಟೆ ಸುಮಾರಿಗೆ ಊಟಿ ರಸ್ತೆಯ ಮಹೇಶ್ ಚಂದ್ರ ಗುರು ಅವರಿಗೆ ಸೇರಿದ ಜಮೀನಿಗೆ ಬಂದು ತಂದೆ ಹಾಗೂ ಮಗನಿಗೆ ಮೊದಲು ಗುಂಡು ಹೊಡೆದ ಓಂ ಪ್ರಕಾಶ್, ನಂತರ ತಾಯಿ, ಬಳಿಕ 8 ತಿಂಗಳ ಗರ್ಭಿಣಿ ಹೆಂಡತಿಗೆ ಗುಂಡಿಕ್ಕಿ ಕೊನೆಗೆ ತನಗೆ ತಾನೇ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ವ್ಯವಹಾರದಲ್ಲಿ ನಷ್ಟ ಉಂಟಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುವುದು ಎಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಸೆಕ್ಷನ್ 302, 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿಯಬೇಕಾಗಿದೆ.