ನವದೆಹಲಿ, ಆ.16(Daijiworld News/SS): ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರ ಸಂಪೂರ್ಣ ಮಾಹಿತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರ ಸಂಪೂರ್ಣ ಮಾಹಿತಿಯನ್ನು ಮೋದಿ ಪಡೆದಿದ್ದಾರೆ. ಹಣ ಬಿಡುಗಡೆ ಬಗ್ಗೆ ಚರ್ಚೆ ಮಾಡಿ ಹೇಳುತ್ತೇವೆ ಎಂದಿದ್ದಾರೆ. ನೆರೆ ಹಾನಿ ಅಧ್ಯಯನಕ್ಕೆ ಕೂಡಲೇ ವಿಶೇಷ ಅಧ್ಯಯನ ತಂಡವನ್ನು ಕಳುಹಿಸಲಿದ್ದಾರೆ ಎಂದು ಹೇಳಿದರು.
ಈಗಾಗಲೇ ರಾಜ್ಯಕ್ಕೆ ಅಮಿತ್ ಷಾ, ನಿರ್ಮಲಾ ಸೀತಾರಾಮ್ ಬಂದು ಹೋಗಿದ್ದಾರೆ. ತಕ್ಷಣ ಮತ್ತೊಂದು ಅಧ್ಯಯನ ತಂಡ ಕಳುಹಿಸುತ್ತಾರೆ. ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಬಿಟ್ಟಿದ್ದರಿಂದಾಗಿ ಉಂಟಾಗಿರುವ ಅವಘಡವನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ತತ್ಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಕೇಳಿದ್ದು, ಅವರು ಕೂಡಲೇ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
40 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಮನೆ, ರಸ್ತೆ, ಸೇತುವೆ ಸೇರಿದಂತೆ ಹಲವು ನಷ್ಟ ಸಂಭವಿಸಿದೆ. ಈ ಎಲ್ಲ ಸಂಗತಿಯನ್ನು ಪ್ರಧಾನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ಹಣ ಬಿಡುಗಡೆ ಬಗ್ಗೆ ಚರ್ಚೆ ಮಾಡಿ ಹೇಳುತ್ತೇವೆ ಎಂದಿದ್ದಾರೆ. ನಮಗೆ ಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.