ನವದೆಹಲಿ, ಆ.16(Daijiworld News/SS): ನಕಲಿ ವೋಟರ್ ಐಡಿ ಹಾಗೂ ಡುಪ್ಲಿಕೇಟ್ ಹಾವಳಿ ಕಡಿಮೆ ಮಾಡಲು ವೋಟರ್ ಐಡಿಯನ್ನು ಆಧಾರ್ ನಂಬರ್ ಜೊತೆ ಜೋಡಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಮನವಿ ಮಾಡಿದೆ.
ನಕಲಿ ಮತದಾನವನ್ನು ತಪ್ಪಿಸಲು ಇದರಿಂದ ಸಾಕಷ್ಟು ಸಹಾಯವಾಗುತ್ತದೆ ಎಂದಿರುವ ಚುನಾವಣಾ ಆಯೋಗ, ಒಬ್ಬ ವ್ಯಕ್ತಿ ಒಂದೇ ವೋಟರ್ ಐಡಿಯನ್ನು ಹೊಂದುವಂತೆ ಇದು ಮಾಡುತ್ತದೆ ಎಂದು ಪತ್ರದಲ್ಲಿ ಹೇಳಿದೆ. ನಕಲಿ ಮತದಾನ ತಡೆಗೆ ಆಧಾರ್-ವೋಟರ್ ಐಡಿ ಲಿಂಕ್ ಮಾಡಿಸಿ: ನಿವೃತ್ತ ಜಡ್ಜ್ ಸಲಹೆ ಹನ್ನೆರಡು ಅಂಕಿಯ ಆಧಾರ್ ಸಂಖ್ಯೆಯನ್ನು ವೋಟರ್ ಐಡಿಗೆ ಲಿಂಕ್ ಮಾಡುವುದು ಇಷ್ಟು ದಿನ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಅದನ್ನು ಕಡ್ಡಾಯಗೊಳಿಸಿದರೆ, ನಕಲಿ ಮತದಾರರ ಚೀಟಿಯ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದೆ.
ಕಾನೂನು ಸಚಿವಾಲಯಕ್ಕೆ ಈ ಮೊದಲು ಬರೆದ ಪತ್ರದಲ್ಲಿ 1950ರ ಜನಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಮತ್ತು ನಕಲಿ ಮತದಾರರ ಗುರುತುಪತ್ರ ಹಾಗೂ ನಕಲಿ ಗುರುತು ಪತ್ರಕ್ಕೆ ಕಡಿವಾಣ ಹಾಕಲು ವೋಟರ್ ಐಡಿಯನ್ನು ಆಧಾರ್ ಜತೆ ಲಿಂಕ್ ಮಾಡಬೇಕು ಎಂದು ಉಲ್ಲೇಖಿಸಿತ್ತು. ನಕಲಿ ಮತದಾನಕ್ಕೆ ಕಡಿವಾಣ ಮತ್ತು ಒಬ್ಬ ವ್ಯಕ್ತಿ ಕೇವಲ ಒಂದೇ ಮತ ಚಲಾಯಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಕೆಲವು ದಶಕಗಳಿಂದ ಒತ್ತಾಯಿಸುತ್ತಾ ಬಂದಿದೆ. ಆಧಾರ್ ನ 12 ಸಂಖ್ಯೆಯನ್ನು ಎಲ್ಲಾ ವೋಟರ್ ಐಡಿಗೆ ಸ್ವಯಂ ಜೋಡಿಸುವುದಾಗಿ ಚುನಾವಣಾ ಆಯೋಗ ಈ ಮೊದಲು ತಿಳಿಸಿತ್ತು.
ಆದರೆ 2016ರಲ್ಲಿ ಕೇಂದ್ರದ ಮಾಜಿ ಮುಖ್ಯ ಚುನಾವಣಾಧಿಕಾರಿ ಎಕೆ ಜೋಟಿ ಅವರು ಅಧಿಕಾರ ಸ್ವೀಕರಿಸಿದ್ದ ವೇಳೆ ಈ ನಿರ್ಧಾರವನ್ನು ಚುನಾವಣಾ ಆಯೋಗ ಬದಲಿಸಿತ್ತು. ಈ ಮಧ್ಯೆ ಸುಮಾರು 32 ಕೋಟಿ ಜನರ ಆಧಾರ್ ನಂಬರ್ ಅನ್ನು ವೋಟರ್ ಐಡಿಗೆ ಜೋಡಿಸಲಾಗಿತ್ತು. ಮತ್ತೊಂದೆಡೆ 2015ರಲ್ಲಿ ಸುಪ್ರೀಂಕೋರ್ಟ್ ಆಧಾರ್ ನಂಬರ್ ಅನ್ನು ಸರಕಾರಿ ಯೋಜನೆಗಳಿಗೆ ಹೊರತುಪಡಿಸಿ ಬೇರೆ ಯಾವುದಕ್ಕೂ ಉಪಯೋಗಿಸದಂತೆ ತಡೆ ನೀಡಿತ್ತು. 2017ರಲ್ಲಿ ವೋಟರ್ ಐಡಿ ಮತ್ತು ಆಧಾರ್ ಸಂಖ್ಯೆ ಜೋಡಿಸಿದ್ದ ವಿವರಗಳನ್ನು ಚುನಾವಣಾ ಆಯೋಗ ಸುಪ್ರೀಂಕೋರ್ಟ್'ಗೆ ನೀಡಿತ್ತು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಆಧಾರ್ ಸಿಂಧುತ್ವದ ಕುರಿತಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಆಧಾರ್ ಸಾಂವಿಧಾನಿಕ, ಅದು ಎಲ್ಲಾ ಸರ್ಕಾರಿ ಸೌಲಭ್ಯಗಳಿಗೆ ಕಡ್ಡಾಯ, ಆದರೆ ಎಲ್ಲ ವೈಯಕ್ತಿಕ ದಾಖಲಾತಿಗಳಿಗೂ ಅದನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂಬ ತೀರ್ಪು ನೀಡಿತ್ತು. 'ಖಾಸಗೀತನವನ್ನೂ ಮೂಲಭೂತ ಹಕ್ಕು' ಎಂದು ಸುಪ್ರೀಂ ಕೋರ್ಟೇ ತೀರ್ಪು ನೀಡಿದ್ದ ಕಾರಣ, ಆಧಾರ್ ಅನ್ನು ಎಲ್ಲಾ ವೈಯಕ್ತಿಕ ದಾಖಲೆಗಳಿಗೂ ಜೋಡಿಸುವುದರಿಂದ ದತ್ತಾಂಶ ಸೋರಿಕೆಯಾಗುತ್ತದೆ. ಖಾಸಗೀ ಮಾಹಿತಿಗಳು ಸೋರಿಕೆಯಾಗುತ್ತವೆ. ಇದರಿಂದ ಖಾಸಗೀತನಕ್ಕೆ ಧಕ್ಕೆಯಾದಂತಾಗುತ್ತದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಧಾರ ಕಡ್ಡಾಯವಲ್ಲ ಎಂದಿತ್ತು.