ಬೆಂಗಳೂರು, ಆ.16(Daijiworld News/SS): ನೆರೆ ವಿಚಾರದಲ್ಲಿ ಯಡಿಯೂರಪ್ಪ ಸಂತ್ರಸ್ತರಿಗೆ ಮಾತು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಮೊದಲು ಯಡಿಯೂರಪ್ಪ ನಡೆದುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು, ಮಲೆನಾಡು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಿಎಂ ಪ್ರತಿ ಮನೆಗೆ 5 ಸಾವಿರ ಕೊಡ್ತೇನೆ, 5 ಲಕ್ಷ ಕೊಡ್ತೇನೆ ಎಂದು ಘೋಷಿಸಿದ್ದಾರೆ. ನಿಮ್ಮ ಅಧಿಕಾರಿಗಳನ್ನ ಬಳಸಿಕೊಂಡು ಚೆಕ್ ವಿತರಿಸಿ. ನೆರೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ಮೊದಲು ಸಂತ್ರಸ್ತರಿಗೆ ಚೆಕ್'ಗಳನ್ನ ವಿತರಿಸಲಿ. ಅವರು ಹೇಳಿದಂತೆ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ.
ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪ ಮಾಡಿದ್ದಾರೆ. ಆದರೆ ಯಾವ ಫೋನ್ ಕೂಡ ಟ್ಯಾಪಿಂಗ್ ಆಗಿಲ್ಲ. ಮಾಧ್ಯಮಗಳಿಗೆ ಅದು ಹೇಗೆ ಸಿಗ್ತೋ ಗೊತ್ತಿಲ್ಲ. ನಾನು ಇದರ ಬಗ್ಗೆ ವಿಚಾರಿಸಿದ್ದೇನೆ. ಸಿಎಂ ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಹೇಳಿದ್ದಾರೆ.
ಹಿಂದಿನ ಗೃಹ ಸಚಿವರಿಗೆ ರಾಜಕಾರಣ ಬೇಕಾಗಿದೆ. ಹಾಗಾಗಿ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಮೇಲೆಲ್ಲಾ ರೈಡ್'ಗಳು ಆಗಿದೆ. ಏನ್ ಬೇಕೋ ಮಾಡಲಿ, ಹೇಳಲಿ. ಬಿಜೆಪಿಯವರೇ ನಮ್ಮ ಫೋನ್ ಕದ್ದಾಲಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯ ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದ್ಧತೆಯಿಂದ ಈ ಯೋಜನೆ ತಂದಿದ್ದಾರೆ. ನಮ್ಮ ಹಳೆಯ ಯೋಜನೆ ಕೈ ಬಿಟ್ಟರೆ ಸರಿಯಲ್ಲ. ರದ್ದು ಪಡಿಸುವುದನ್ನ ಮಾಡಬಾರದು. ನಮ್ಮ ಯೋಜನೆಗೆ ಬಗ್ಗೆ ನಮಗೆ ಬದ್ಧತೆಯಿದೆ. ದ್ವೇಷದ ರಾಜಕಾರಣ ಮಾಡಲ್ಲ. ಬಿಜೆಪಿಯವರು ಅದರಂತೆ ನಡೆದುಕೊಳ್ಳಬೇಕು. ನಮ್ಮ ಕಾರ್ಯಕ್ರಮ ತೆಗೆದರೆ ನಾವು ಸುಮ್ಮನಿರಲ್ಲ. ಅದರ ಬಗ್ಗೆ ವಿಸ್ತೃತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.