ಬೆಂಗಳೂರು,ಆ 16 (Daijiworld News/RD): ಬೇರೆ ರಾಜ್ಯದಿಂದ ಉದ್ಯೋಗ ಆರಿಸಿಕೊಂಡ ಬಂದ ಯುವತಿಯರನ್ನು ಬಾರ್ ಗರ್ಲ್ಗಳನ್ನಾಗಿ ಮಾಡಿ ಅವರಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡಿಸುತ್ತಿದ್ದ ಉಪ್ಪಾರ್ ಪೇಟೆಯ ಬ್ಲೂ ಹೆವನ್ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ಇಂದು ಸಿಸಿಬಿ ಪೊಲೀಸರು ದಾಳಿ ನಡೆಸಿ, 66 ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯದರು.
ದಾಳಿ ವೇಳೆಯಲ್ಲಿ 46 ಗಿರಾಕಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು 66 ಹೊರ ರಾಜ್ಯದ ಯುವತಿಯರನ್ನು ರಕ್ಷಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಧರ್ಮ(41), ಕಲ್ಲೇಶ್ (34), ಶ್ರೀಕಾಂತ್ (28),ನಾಗರಾಜ್ (46) ಮಂಡ್ಯ ಮೂಲದ ನಂಜೇಶ್ (40) ರಂಗಸ್ವಾಮಿ (44) ಹಾಗೂ ಚೆಲುವರಾಜು (32) ಒಡಿಶಾ ಮೂಲದ ಸುಬಾನ್ (23) ಸೇರಿ ಒಟ್ಟು 64 ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದರು. ಜೊತೆಗೆ 65,770 ನಗದು , ಮ್ಯೂಸಿಕ್ ಸೆಟ್, ಸ್ವೈಪಿಂಗ್ ಮೆಷಿನ್ ವಶಪಡಿಸಿಕೊಂಡಿದ್ದಾರೆ. ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸಿ, ಅಲ್ಲಿಗೆ ಬಂದ ಗಿರಾಕಿಗಳು ಅವರ ಮೇಲೆ ಹಣ ಎಸೆಯುವಂತೆ ಪ್ರಚೋದಿಸಿ ಸಂಪಾದನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ತಿಳಿದ ಸಿಸಿಬಿ ಅಧಿಕಾರಿಗಳು ಬಳಿಕ ದಾಳಿ ನಡೆಸಿ ಕಾರ್ಯಾಚರಣೆ ಮಾಡಿ ಯುವತಿಯರನ್ನು ರಕ್ಷಿಸಿದರು.
ಬ್ಲೂ-ಹೆವನ್ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರಾದ ದಿನೇಶ್ ಶೆಟ್ಟಿ, ಮಹೇಶ್ ಮತ್ತು ಕಿರಣ್ ಎಂಬುವವರು ನಾಪತ್ತೆಯಾಗಿದ್ದು, ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.