ಬೆಂಗಳೂರು,ಆ 17 (Daijiworld News/RD): ಈ ಹಿಂದೆಂದೂ ಕಂಡು ಕೇಳರಿಯದ ಭೀಕರ ಪ್ರವಾಹದಿಂದಾಗಿ ರಾಜ್ಯ ತತ್ತರಿಸಿ ಹೋಗಿದ್ದು, 60ಕ್ಕೂಅಧಿಕ ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಪ್ರವಾಹದಿಂದ ರಾಜ್ಯಕ್ಕೆ 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದರೂ ಕೂಡ, ಕೇಂದ್ರ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಿಟ್ಟರೆ ಯಾವುದೇ ರೀತಿಯ ಪರಿಹಾರ ಕ್ರಮವನ್ನು ಕೈಗೊಂಡಿಲ್ಲ. ಕೇಂದ್ರದ ಈ ಧೋರಣೆ ಸರಿಯಲ್ಲ, ಕರ್ನಾಟಕವನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಈ ಹಿಂದೆ ನೆರೆ ಇಲ್ಲವೆ ಬರ ಪರಿಸ್ಥಿತಿ ಎದುರಿಸಿದ ಸಂದರ್ಭಗಳಲ್ಲಿ, ವಾಜಪೇಯಿ ಸರ್ಕಾರವೂ ಸೇರಿದಂತೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಕೇಂದ್ರ ಸರ್ಕಾರವೂ, ಯಾವ ಪ್ರಧಾನಿಯೂ ಕರ್ನಾಟಕವನ್ನು ಈ ರೀತಿಯಾಗಿ ನಿರ್ಲಕ್ಷಿಸಿಲ್ಲ, ಮುಖ್ಯಮಂತ್ರಿಗಳನ್ನು ಈ ರೀತಿಯಾಗಿ ಅವಮಾನಿಸಿಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸದು ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇಂದ್ರ ಸರ್ಕಾರದ ಬಳಿ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದು, ಜೊತೆಗೆ ಸದ್ಯದ ಪರಿಸ್ಥಿತಿಗೆ ತುರ್ತಾಗಿ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.