ಶ್ರೀನಗರ,ಆ 17 (Daijiworld News/RD): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ ಕಣಿವೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಿತ್ತು, ಇದೀಗ ಸದ್ಯದ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದು, ನಿರ್ಬಂಧಗಳ ಬಳಿಕ ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಮರು ಕಲ್ಪಿಸಿದೆ.
ಶುಕ್ರವಾರ ಮಧ್ಯರಾತ್ರಿಯಿಂದ ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಾದ ಜಮ್ಮು, ರಿಯಾಸಿ, ಸಾಂಬಾ, ಕಥುವಾ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ 2ಜಿ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಪುನರಾಂಭಗೊಳಿಸಿದೆ. ಜೊತೆಗೆ ಯಾವುದೇ ರೀತಿಯ ಅಪ್ರಯೋಜಕ, ಅನಪೇಕ್ಷಿತ, ಪ್ರಚೋಧನಕಾರಿ ಅಂಶಗಳನ್ನು ಸಾಮಜಿಕ ಜಾಲತಾಣದಲ್ಲಿ ಹಾಕುವಂತಿಲ್ಲ ಎಂದು ಆದೇಶ ನೀಡಿದೆ.
ರಾಜ್ಯಪಾಲ ಸತ್ಯಪಾಲ್ ಮಲಿಕ್ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಶುಕ್ರವಾರ ಆದೇಶ ಹೊರಡಿಸಿದ್ದು, ನಿನ್ನೆ ಮುಂಜಾನೆಯಿಂದ ಜಮ್ಮು- ಕಾಶ್ಮೀರಕ್ಕೆ ಹೇರಿದ್ದ ನಿಷೇಧಾಜ್ಞೆಯನ್ನು ಹಂತ ಹಂತವಾಗಿ ಹಿಂತೆಗೆದುಕೊಂಡು ಇದೀಗ ಒಂದೊಂದೇ ಸೇವೆಗಳನ್ನು ಒದಗಿಸುತ್ತ ಬಂದಿದೆ. ರಜೌರಿ ಜಿಲ್ಲೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಕಾಶ್ಮೀರ ಕಣಿವೆಯಲ್ಲಿ 22 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಹಿಂಸಾಚಾರ ಘಟನೆ ನಡೆದ ಬಗ್ಗೆ ವರದಿಗಳಾಗಿಲ್ಲ. ಹೀಗಾಗಿ ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರಾಳವಾಗಿ ಮಾಡುತ್ತಿದ್ದಾರೆ. ಐದು ಜಿಲ್ಲೆಗಳಲ್ಲಿ ರಾತ್ರಿ ವೇಳೆ ಮಾತ್ರ ಕೆಲವು ನಿರ್ಬಂಧಗಳು ಜಾರಿಯಲ್ಲಿದೆ ಎಂದು ಮುಲಗಳಿಂದ ತಿಳಿದು ಬಂದಿದೆ.
ಕಳೆದ ಹಲವು ದಿನಗಳಿಂದ ಇಂಟರ್ ಸೇವೆ ಇಲ್ಲದೆ ಮಂಕಾದ ಜನರಿಗೆ ಮೊಬೈಲ್ ನಲ್ಲಿ ಇಂಟರ್ನೆಟ್ ಸೇವೆ ಆರಂಭವಾಗುತ್ತಿದ್ದಂತೆ ಜಮ್ಮು-ಕಾಶ್ಮೀರ ಮತ್ತು ಲಡಾಕ್ ನ ಜನರು ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ನಿರತರಾಗಿರುವುದು ಕಂಡುಬಂತು. ಬುದ್ಗಾಮ್, ಸೋನಮಾರ್ಗ್ ಮತ್ತು ಮನಿಗಮ್ ಪ್ರದೇಶಗಳಲ್ಲಿ, ಉತ್ತರ ಕಾಶ್ಮೀರದ ಗುರೆಝ್, ತಂಗ್ ಮಾರ್ಗ್, ಉರಿ ಕೆರನ್ ಕರ್ನಾ ಮತ್ತು ಟಂಗ್ ದಾರ್, ದಕ್ಷಿಣ ಕಾಶ್ಮೀರದ ಖ್ವಾಜಿಗುಂಡ್ ಮತ್ತು ಪಹಲ್ಗಾಮ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆಗಳನ್ನು ಮರು ಆರಂಭಿಸಲಾಗಿದೆ. ಜೊತೆಗೆ ಕಣಿವೆಯಲ್ಲಿ ಸ್ಥಿರ ದೂರವಾಣಿ ಸೇವೆ 17 ವಿನಿಮಯ ಕೇಂದ್ರಗಳಲ್ಲಿ ಮರುಸ್ಥಾಪನೆಯಗಿದ್ದು, 100 ಟೆಲಿಫೋನ್ ಎಕ್ಸ್ ಚೇಂಜ್ ಗಳಲ್ಲಿ ಕಾರ್ಯನಿರ್ವಹಿಸಲಿದೆ.