ಚಂಡೀಗಢ, ಆ 18 (DaijiworldNews/SM): ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಭಾರತ ಪಾಕ್ ನೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಒಂದೊಮ್ಮೆ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸುವುದಾದರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದ ಬಗ್ಗೆ ಮಾತ್ರ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಈಗಾಗಲೇ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ. ಭಾರತ ತಪ್ಪು ಮಾಡಿದೆ ಎಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿದೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಸಿದ್ದ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಬಾಲಾಕೋಟ್ ವಾಯು ದಾಳಿಗಿಂತ ದೊಡ್ಡ ಮಟ್ಟದ ಕಾರ್ಯತಂತ್ರವನ್ನು ಭಾರತ ಯೋಜಿಸುತ್ತಿದೆ ಎಂದು ಹೇಳಿದ್ದರು. ಅಂದರೆ ಬಾಲಾಕೋಟ್ ವಾಯುದಾಳಿ ನಡೆದಿದ್ದು ನಿಜವೆಂದು ಪಾಕಿಸ್ತಾನ ಒಪ್ಪಿಕೊಂಡಂತಾಯಿತಲ್ಲವೇ ಎಂದು ರಾಜನಾಥ್ ಸಿಂಗ್ ಹೇಳಿದರು.