ಬೆಂಗಳೂರು, ಆ 18 (DaijiworldNews/SM): ರಾಜ್ಯದಲ್ಲಿ ತೀವ್ರ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿದ್ದು, ನೆರೆ ಸಂತ್ರಸ್ಥರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಪ್ಪೆ ಟೀಚರ್ ಚಿತ್ರ ಹಾಗೂ ಮಾಲ್ಗುಡಿ ಡೇಸ್ ಚಿತ್ರದ ನಿರ್ಮಾಪಕ ಕೆ. ರತ್ನಾಕರ್ ಕಾಮತ್ ನೆರವು ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 6 ಲಕ್ಷ ರೂಪಾಯಿ ಹಸ್ತಾಂತರಿಸಿದ್ದಾರೆ.
ಪ್ರವಾಹ ನಿಯಂತ್ರಣ ಕೆಲಸ-ಕಾರ್ಯಗಳಿಗಾಗಿ ದೇಣಿಗೆ ನೀಡುವಂತೆ ಉದ್ಯಮಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ನೀಡಿದ ಕರೆಯಂತೆ ಬೆಂಗಳೂರಿನ ಸ್ವಯಂಪ್ರಭಾ ಉದ್ಯಮ ಸಮೂಹದ ವತಿಯಿಂದ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಲಾದ 6.03 ಲಕ್ಷ ಮೊತ್ತದ ದೇಣಿಗೆಯ ಚೆಕ್ಕನ್ನು ಸಿಎಂ ಅವರಿಗೆ ಹಸ್ತಾಂತರಿಸಲಾಯಿತು.
ಮುಖ್ಯಮಂತ್ರಿಗಳ ನಿವಾಸ ಧವಳಗಿರಿಯಲ್ಲಿ, ಅಪ್ಪೆ ಟೀಚರ್ ಮತ್ತು ಮಾಲ್ಗುಡಿ ಡೇಸ್ ಚಿತ್ರದ ನಿರ್ಮಾಪಕ ಹಾಗೂ ಸ್ವಯಂಪ್ರಭಾ ಸಮೂಹದ ಮುಖ್ಯಸ್ಥ ಕೆ. ರತ್ನಾಕರ್ ಕಾಮತ್ ಚೆಕ್ ಹಸ್ತಾಂತರಿಸಿದರು.
ಸಂಸ್ಥೆಯ ಪಾಲುದಾರರಾದ ಲಕ್ಷ್ಮಿ ಆರ್ ಕಾಮತ್, ಕೆ.ಗಣೇಶ್ ಕಾಮತ್ ಮತ್ತು ಮಾಲ್ಗುಡಿ ಡೇಸ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ರವಿಶಂಕರ್ ಪೈ ಈ ಸಂದರ್ಭದಲ್ಲಿ ಹಾಜರಿದ್ದರು.