ಚೆನ್ನೈ, ಆ.19(Daijiworld News/SS): ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್'ಗಳ ವೈಜ್ಞಾನಿಕ ಪರಿಕರಗಳನ್ನು ಹೊತ್ತ ಚಂದ್ರಯಾನ-2 ಉಪಗ್ರಹ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಭೂ ಕಕ್ಷೆ ಹಾಗೂ ಚಂದ್ರನ ಕಕ್ಷೆಯ ಮಧ್ಯೆ ತಲುಪಿದೆ. ಆ. 20ರಂದು ಇಸ್ರೋದ ಉಪಗ್ರಹ ಚಂದ್ರನ ಕಕ್ಷೆಗೆ ತಲುಪಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಂಕಾಕ್ಷಿ ಚಂದ್ರಯಾನ-2 ಅಭಿಯಾನ ನಿರೀಕ್ಷೆಯಂತೆ ಪ್ರಗತಿಯಲ್ಲಿದ್ದು ಚಂದ್ರನ ಹತ್ತಿರಕ್ಕೆ ಸಾಗಿದೆ. ಜುಲೈ 22 ರಂದು ಚಂದ್ರಯಾನ-2 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ-ಮಾರ್ಕ್ 3 ವಾಹಕ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭದತ್ತ ಚಿಮ್ಮಿತ್ತು. ಇದೀಗ ಬಾಹ್ಯಾಕಾಶದಲ್ಲಿ, ಚಂದ್ರಯಾನ-2 ಪರಿಕರಗಳು ನಮ್ಮ ನಿರೀಕ್ಷೆಯಂತೆ ಸಾಗುತ್ತಿವೆ.
ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್ ಖಚಿತವಾಗಿ ಇಳಿಯಲಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಈ ಮೂಲಕ ಚಂದ್ರಯಾನ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದಿದೆ. ಸೆಪ್ಟಂಬರ್ 2ರಂದು ಪೈಕಿ ಲ್ಯಾಂಡರ್ ವಿಕ್ರಂನಿಂದ ರೋವರ್ ಪ್ರಗ್ಯಾನ್ ಬೇರ್ಪಡಲಿದೆ. ಹಲವು ಪ್ರಕ್ರಿಯೆಗಳು ನಡೆದ ಬಳಿಕ ಸೆಪ್ಟಂಬರ್ 7ರಂದು ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಯಲಿದೆ.