ಶ್ರೀನಗರ, ಆ.19(Daijiworld News/SS): ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜಮ್ಮು ಕಾಶ್ಮೀರದಲ್ಲಿ ನಿಷೇಧಾಜ್ಞೆಯನ್ನು ಸಡಿಲಗೊಳಿಸಲಾಗುತ್ತಿದೆ. ಕಳೆದ 15 ದಿನಗಳಿಂದ ಮುಚ್ಚಿರುವ ಶಾಲಾ ಕಾಲೇಜುಗಳು ಮತ್ತು ಸರಕಾರಿ ಕಚೇರಿಗಳು ಇಂದಿನಿಂದ ಮತ್ತೆ ಆರಂಭವಾಗಲಿವೆ.
ವಿಶೇಷ ಸ್ಥಾನಮಾನ ರದ್ದತಿಯ ಮೊದಲೇ ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆ ರಾಜ್ಯದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚುವರಿ ಯೋಧರನ್ನು ನೇಮಿಸಲಾಗಿತ್ತು. ಈ ವೇಳೆಗೆ ಎಲ್ಲಾ ಶಾಲಾ ಕಾಲೇಜು, ಸರಕಾರಿ ಕಚೇರಿಗಳನ್ನು ಮುಚ್ಚಲಾಗಿತ್ತು. ಈಗ 15 ದಿನಗಳ ಬಳಿಕ ಅಂದರೆ ಸೋಮವಾರದಿಂದ ಮತ್ತೆ ಆರಂಭವಾಗಲಿದೆ. ಜನ ಸಂಚಾರ ಹಾಗೂ ಸಂಪರ್ಕದ ಮೇಲಿನ ನಿರ್ಬಂಧಗಳನ್ನು ಕ್ರಮೇಣ ಕಡಿತಗೊಳಿಸಲಾಗುತ್ತಿದ್ದು ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಇನ್ನೂ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಇರಿಸಲಾಗಿದೆ.
ಆ.18ರಂದು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಕಾಶ್ಮೀರ ಕಣಿವೆಯಲ್ಲಿ ಇನ್ನೂ 10 ದೂರವಾಣಿ ಸಂಭಾಷಣಾ ಕೇಂದ್ರಗಳನ್ನು ಕಾರ್ಯಗತಗೊಳಿಸಿದ್ದಾರೆ. ಆದರೆ ಆ.17ರಂದು ಪುನಃಸ್ಥಾಪಿಸಲಾದ 17 ಕೇಂದ್ರಗಳಲ್ಲಿ ಒಂದನ್ನು ಮತ್ತೆ ಮುಚ್ಚಲಾಗಿದೆ. ತಪ್ಪು ಮಾಹಿತಿ ಪ್ರಚಾರಕ್ಕಾಗಿ ಲ್ಯಾಂಡ್ಲೈನ್ ಫೋನ್ಗಳನ್ನು ಬಳಸಲಾಗುತ್ತಿದೆ ಎಂಬ ವರದಿಗಳ ನಂತರ ಅಧಿಕಾರಿಗಳು 17 ವಿನಿಮಯ ಕೇಂದ್ರಗಳಲ್ಲಿ ಒಂದನ್ನು ಮುಚ್ಚಿದ್ದಾರೆ. ಇವುಗಳೊಂದಿಗೆ, ಕಾಶ್ಮೀರ ಕಣಿವೆಯಲ್ಲಿ ಸುಮಾರು 50,000 ದಲ್ಲಿ ಸುಮಾರು 28,000 ಸ್ಥಿರ ದೂರವಾಣಿ ಫೋನ್ಗಳು ಕಾರ್ಯನಿರ್ವಹಿಸುತ್ತಿವೆ.
ಕಣಿವೆಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರದ ವರದಿಯಾಗಿಲ್ಲ. ಆದರೆ ಶ್ರೀನಗರದಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದೆ. ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ ಮತ್ತು ಯಾವುದೇ ದೊಡ್ಡ ಗಲಭೆಗಳು ನಡೆದಿಲ್ಲ ಎಂದು ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.