ಬೆಂಗಳೂರು, ಆ.19(Daijiworld News/SS): ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ.
ನಗರದಲ್ಲಿ ಸೋಮವಾರ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆಗಸ್ಟ್ 19 ಹಾಗೂ 20 ರಂದು ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದೂ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಹಲವೆಡೆ ಮುಂಗಾರಿನ ಆರ್ಭಟ ಮುಂದುವರಿದಿದ್ದು, ಭಾನುವಾರ ರಾಜ್ಯ ರಾಜಧಾನಿಯ ಹಲವೆಡೆ ಭಾರಿ ಮಳೆಯಾಗಿದೆ. ಭಾನುವಾರ ಬೆಳಗ್ಗೆ, ರಾತ್ರಿ ಹಾಗೂ ಶನಿವಾರ ಮಧ್ಯರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯೂ ಮಳೆ ಸುರಿದಿದೆ.
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದ ನಗರದಲ್ಲಿ ಮಳೆ ಸುರಿಯುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿರುವುದು ಕೂಡ ಮಳೆ ಮುಂದುವರಿಯಲು ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೆ 27-28 ಡಿಗ್ರಿಯಷ್ಟಿದ್ದ ತಾಪಮಾನ ಶನಿವಾರ 24 ಡಿಗ್ರಿಗೆ ಇಳಿಕೆಯಾಗಿತ್ತು. ಶನಿವಾರ ರಾತ್ರಿಯಿಡೀ ಮಳೆ ಸುರಿದಿರುವುದು ಹಾಗೂ ಭಾನುವಾರದ ತುಂತುರು ಮಳೆಯಿಂದಾಗಿ ಕೇಂದ್ರಭಾಗಗಳಲ್ಲಿ 23.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.