ಬೆಂಗಳೂರು,ಆ 19 (Daijiworld News/RD): ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ನೇಮಕಗೊಂಡು ದಿನಗಳೇ ಕಳೆದಿದ್ದು, ಕೊನೆಗೂ ಸಂಪುಟ ವಿಸ್ತರಣೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಂಪುಟ ರಚನೆಯ ವಿಸ್ತರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ಸಂಪುಟ ರಚನೆಯ ವಿಸ್ತರಣೆಗೆ ಮೊದಲ ಹಂತದ ಪಟ್ಟಿ ಸಿದ್ಧಗೊಂಡಿದ್ದು, ಮಂಗಳಮಯವಾದ ಮಂಗಳವಾರದಂದು ಯಾವೆಲ್ಲ ಸಚಿವಾಕಾಂಕ್ಷಿಗಳಿಗೆ ಸ್ಥಾನ ನೀಡಲಿದೆ ಎನ್ನುವುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಪಾಲು ಕ್ಷೇತ್ರದಲ್ಲಿ ಜಿಜೆಪಿ ಬಹುಮತ ಸಾಧಿಸಿದ್ದು, ಹಾಗಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ರಾಜ್ಯದಲ್ಲಿ ಹಲವು ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಶಾಸಕ ಜಗದೀಶ್ ಶೆಟ್ಟರ್, ಗೋವಿಂದರಾಜ ನಗರದ ಶಾಸಕ ವಿ.ಸೋಮಣ್ಣ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ, ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ ಅವರು ಲಿಂಗಾಯತ ಸಮುದಾಯದ ನಾಯಕರಾಗಿದ್ದು, ಈ ಐದು ಜನ ಲಿಂಗಾಯುತ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ. ಎಸ್ಸಿ-ಎಸ್ಟಿಗೆ ಹೆಚ್ಚು ಸಚಿವ ಸ್ಥಾನ ಸಾಧ್ಯತೆ ಇದ್ದು, ಪಕ್ಷೇತರ ನಾಗೇಶ್ ಸೇರಿದಂತೆ ಎಸ್.ಸಿ.ಗೆ 4 ಹಾಗೂ ಎಸ್.ಟಿ.ಗೆ 2 ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ. ಎಸ್ಸಿ ಕೋಟಾದಲ್ಲಿ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್, ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ, ಮುಧೋಳದ ಶಾಸಕ ಗೋವಿಂದ ಕಾರಜೋಳ ಹಾಗೂ ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಎಸ್ಟಿ ಕೋಟಾದಲ್ಲಿ ಮೊಳಕಾಳ್ಮೂರು ಶಾಸಕ ಶ್ರೀರಾಮುಲು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.
ಮೊದಲ ಹಂತದಲ್ಲಿ 15 ರಿಂದ 18 ಜನರಿಗೆ ಸಚಿವರಾಗಿ ಅವಕಾಶ ನೀಡಲಿದ್ದು, ಇನ್ನುಕುರುಬ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ, ಬಂಟ ಸಮುದಾಯದಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹಾಗೂ ಬಿಲ್ಲವ ಸಮುದಾಯದಿಂದ ಕೋಟಾ ಶ್ರೀನಿವಾಸ್ ಪೂಜಾರಿ ಈ ಮೂವರಿಗೆ ಮಂತ್ರಿಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಬ್ರಾಹ್ಮಣ ಸಮುದಾಯದಲ್ಲಿ ಸುರೇಶ್ ಕುಮಾರ್, ಕೊಡವ ಸಮುದಾಯದಲ್ಲಿ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ. ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, .ಟಿ. ರವಿ, ಇವರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಲ್ಲಿ ಸೇರಿಸಲಾಗಿಲ್ಲ, ಜೊತೆಗೆ ಬಿಜೆಪಿಯಲ್ಲಿ ಉನ್ನತ ಸ್ಥಾನವನ್ನು ನೀಡಲು ಇನ್ನೂ ನಿರ್ಧರಿಸಿಲ್ಲ.