ಬೆಂಗಳೂರು, ಆ.19(Daijiworld News/SS): ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ತನ್ನ ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಷಾ ಅವರ ಮರ್ಜಿಗಾಗಿ ಕಾಯುತ್ತಿದ್ದಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ತನ್ನ ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಫೋನ್ ಟ್ಯಾಪಿಂಗ್ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಆಗ್ರಹಿಸಿದರು. ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್ವೈ ಆಡಿಯೋ ಪ್ರಕರಣವನ್ನು ತನಿಖೆ ಮಾಡಲಿಲ್ಲ. ಆದರೆ, ಇವರು ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮೀತ್ ಷಾ ಅವರನ್ನು ಕಂಡರೆ ಭಯ. ಅವರನ್ನು ನೋಡಿದರೆ ಸಾಕು ಗಡಗಡ ನಡುಗುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಈ ಹಿಂದೆ ಸಾಲಮನ್ನಾ ವಿಚಾರವಾಗಿ ದೆಹಲಿಗೆ ಹೋದಾಗ ಏನೂ ಮಾತನಾಡಲಿಲ್ಲ. ರಾಜ್ಯದಲ್ಲಿ ನನ್ನ ಪ್ರಕಾರ ಒಂದು ಲಕ್ಷ ಕೋಟಿ ರೂ. ಹಾನಿಯಾಗಿದೆ. 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೂ ಈವರೆಗೆ ಕೇಂದ್ರದಿಂದ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು.
ಅಮಿತ್ ಷಾ ಹಾಗೂ ನಿರ್ಮಲ ಸೀತಾರಾಮನ್ ಅವರು ಬಂದು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಸಿಎಂ ಬಿಎಸ್ವೈ ಕೂಡ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಬಗ್ಗೆ ವಿವರಿಸಿದ್ದಾರೆ. ಆದರೂ ಅವರು ಎಲ್ಲಿಯೂ ಹಣ ನೀಡುವುದಾಗಿ ಹೇಳಿಲ್ಲ. ಬಿಎಸ್ವೈ ಒನ್ ಮ್ಯಾನ್ ಶೋ ನಡೆಸುತ್ತಿದ್ದಾರೆ. ಇದುವರೆಗೂ ಸಚಿವ ಸಂಪುಟ ರಚನೆ ಆಗಿಲ್ಲ. ರಾಜ್ಯದ ಇತಿಹಾಸದಲ್ಲೇ ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾಂತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇದು ದುರದೃಷ್ಟಕರ ಎಂದು ಟೀಕಿಸಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ ಇವತ್ತಿನವರೆಗೂ ಒಂದು ರೂ. ಬಿಡುಗಡೆ ಮಾಡಿಲ್ಲ. ಬಿಎಸ್ವೈ ಅವರು ಇದುವರೆಗೂ ಲಿಖಿತ ದಾಖಲೆಯನ್ನೇ ಕೊಟ್ಟಿಲ್ಲ ಎಂದು ಟೀಕಿಸಿದರು.