ಬೆಂಗಳೂರು, ಆ.19(Daijiworld News/SS): ಕನ್ನಡ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್ಡಿಕೆ, ಮಾನ್ಯ ಮುಖ್ಯಮಂತ್ರಿಗಳೇ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಿರಿ. ನಿಮ್ಮ ಪೌರುಷವನ್ನು ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ಪಾಲಿನ ನೆರವಿನ ಹಣವನ್ನು ಪಡೆದುಕೊಂಡು ಬರುವುದರಲ್ಲಿ ತೋರಿಸಿ ಎಂದು ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ಜೈನ ಮುನಿಗಳು ವ್ರತ ಮಾಡುವ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಜೈನ್ ಟ್ರಸ್ಟ್ನಲ್ಲಿ ಹಿಂದಿಯಲ್ಲಿ ಜೈನ ಗುರುಗಳಿಗೆ ಸ್ವಾಗತ ಕೋರಿದ್ದ ಬ್ಯಾನರ್ ಹಾಕಲಾಗಿತ್ತು. ಬ್ಯಾನರ್ ಹರಿದು ಕೆಲವರು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸುಮಾರು ಹತ್ತು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಕನ್ನಡ ಪರ ಸಂಘಟನೆಯ ಕೆಲವರಿಂದ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.