ಕಂಠಪೂರ್ತಿ ಕುಡಿದು ಪುಟ್ ಪಾತ್ ನಲ್ಲಿ ಕಾರು ಚಲಾಯಿಸಿ ಭಾರೀ ಅವಾಂತರ - ವಿಡಿಯೋ ವೈರಲ್
Mon, Aug 19 2019 02:59:27 PM
ಬೆಂಗಳೂರು,ಆ 19 (Daijiworld News/RD): ಕುಡಿದ ಮತ್ತಿನಲ್ಲಿ ಚಾಲಕನೋರ್ವ ಪುಟ್ ಪಾತ್ ನಲ್ಲಿ ನಿಂತಿದ್ದ 8 ಜನ ಪಾದಾಚಾರಿಗಳ ಮೇಲೆ ಕಾರು ಹತ್ತಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಜೆಪಿ ನಗರದ ಕೊತ್ತನೂರು ದಿಣ್ಣೆ ನಿವಾಸಿ ರಾಜೇಂದ್ರ ಕೆ ಚಾಲಕನಾಗಿದ್ದು, ಕಂಠಪೂರ್ತಿ ಕುಡಿದು ತನ್ನ ಕಾರನ್ನು ಬೇಕಾಬಿಟ್ಟಿಯಾಗಿ ಓಡಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ ವಾಹನಗಳಿಗೆ ಡಿಕ್ಕಿ ಹೊಡೆದು, ರಸ್ತೆಯಿಂದ ಪುಟ್ ಪಾತ್ ಗೆ ಸಾಗಿದ ಅಲ್ಲಿ ನಿಂತಿದ್ದ ಹಾಗೂ ನಡೆದುಕೊಂಡು ಹೋಗುತ್ತಿದ್ದ 8 ಜನರಿಗೆ ಡಿಕ್ಕಿ ಹೊಡೆದಿದೆ.
ಅಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಚಾಲಕ ರಾಜೇಂದ್ರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆತನನ್ನು ತನಿಖೆ ಒಳಪಡಿಸಿ ಆತ ಮದ್ಯ ಸೇವಿಸಿದ್ದು, ಹೌದು ಎಂದಿದ್ದಾರೆ ಪೊಲೀಸರು.