ಮಂಡ್ಯ, ಆ.19(Daijiworld News/SS): ಕಾರ್ಯಕ್ರಮಗಳಲ್ಲಿ ನನಗೆ ಹಾರ, ಶಾಲು, ಪೇಟ ತೊಡಿಸುವ ಬದಲು ಒಂದೊಂದು ಗಿಡ ನೆಡಿ ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋದ ಕಡೆಯೆಲ್ಲಾ ನನಗೆ ಜನ ಪ್ರೀತಿಯಿಂದ ಹೂವಿನ ಹಾರ, ಶಾಲು, ಪೇಟ ತೆಗೆದುಕೊಂಡು ಬಂದು ಸನ್ಮಾನ ಮಾಡುತ್ತಾರೆ. ಈ ಮೂಲಕ ಅವರು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಅದು ನನಗೆ ಬೇಡ. ಹಣವನ್ನು ಅನಗತ್ಯ ಕೆಲಸಗಳಿಗೆ ಖರ್ಚು ಮಾಡುವುದಕ್ಕಿಂತ ಅದರಿಂದ ಪರಿಸರಕ್ಕೆ ಒಳ್ಳೆಯದಾಗಬೇಕು. ಇಲ್ಲವೆಂದಲ್ಲಿ ಬಡವರಿಗೆ ಏನಾದರೂ ಕೊಡುವುದಾದರೆ ಕೊಡಲಿ. ಸನ್ಮಾನಕ್ಕಾಗಿ ಹಣ ವ್ಯರ್ಥ ಮಾಡಬೇಡಿ ಎಂದು ಕಾರ್ಯಕರ್ತರು, ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ನನಗೆ ಹಾರ, ಶಾಲು, ಪೇಟ ತೊಡಿಸುವ ಬದಲು, ಈ ಪ್ರೀತಿಯನ್ನು ತೋರಿಸಿಕೊಳ್ಳುವುದಕ್ಕೆ ಅವರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿದರೆ ಅವರ ಹೆಸರು ಹಾಕಿ ನನ್ನ ಫೇಸ್ ಬುಕ್ ಪೇಜಿನಲ್ಲಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಧಿವೇಶನ ಮುಗಿದ ಬಳಿಕ ನಾನು ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್ ನಗರ, ಮಂಡ್ಯ ಹೀಗೆ ಎಲ್ಲಾ ತಾಲೂಕುಗಳಿಗೂ ಹೋಗುತ್ತಿದ್ದೇನೆ. ಈ ವೇಳೆ ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ ಎಂದು ಹೇಳಿದರು.