ನವದೆಹಲಿ, ಆ.20(Daijiworld News/SS): ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ತರಾಖಂಡ್, ಹಿಮಾಚಲಪ್ರದೇಶ, ದೆಹಲಿ, ಪಂಜಾಬ್ ಹಾಗೂ ಜಮ್ಮು ಕಾಶ್ಮೀರ ಸೇರಿದಂತೆ 8 ರಾಜ್ಯಗಳು ಅಕ್ಷರಶಃ ತತ್ತರಿಸಿ ಹೋಗಿವೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕುಸಿತ, ಪ್ರವಾಹದಿಂದ 39 ಜನರು ಸಾವನ್ನಪ್ಪಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತದ ಕಾರಣ 22 ಮಂದಿ ಮೃತಪಟ್ಟಿದ್ದಾರೆ. ಉತ್ತರಾಖಂಡದಲ್ಲಿ 17 ಜನರು ಅಸುನೀಗಿದ್ದಾರೆ.
ಗಂಗಾ, ಯಮುನಾ, ಸಟ್ಲೆಜ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ, ದೆಹಲಿ, ಹಿಮಾಚಲ, ಉತ್ತರಾಖಂಡ, ಹರಿಯಾಣ, ಪಂಜಾಬ್ನಲ್ಲಿ ನೆರೆ ಹಾವಳಿ ಉಂಟಾಗಿದೆ. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯಗಳ ಘಟಕಗಳು ಪರಿಹಾರ ಕಾರ್ಯ ಕೈಗೊಂಡಿವೆ.
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಹರಿದ್ವಾರ, ಋಷಿಕೇಶಗಳಲ್ಲಿ ಗಂಗೆ ಉಕ್ಕಿ ಹರಿಯುತ್ತಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ. 18 ಜನರು ಕಣ್ಮರೆಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತದ ಕಾರಣ ಮನಾಲಿ ಮತ್ತು ಕುಲು ಸಂರ್ಪಸುವ ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಸಂಚಾರ ಸ್ಥಗಿತಗೊಂಡಿದೆ. 24 ತಾಸಿನ ಅವಧಿಯಲ್ಲಿ 103 ಮಿ.ಮೀಟರ್ ದಾಖಲೆಯ ಮಳೆ ಸುರಿದಿದೆ. 500 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಸಿಎಂ ಜೈರಾಂ ಠಾಕೂರ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಗಂಗಾ, ಯಮುನಾ, ಘಾಘ್ರಾ ನದಿಗಳು ತುಂಬಿ ಹರಿಯುತ್ತಿದ್ದು, ಆರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ದೆಹಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಪರಿಹಾರ ಕಾರ್ಯ ಪರಿಶೀಲಿಸಿದ್ದಾರೆ. ನಿರಾಶ್ರಿತರಿಗಾಗಿ 2,120 ಟೆಂಟ್ಗಳನ್ನು ನಿರ್ವಿುಸಿದ್ದಾಗಿ ದೆಹಲಿ ಸರ್ಕಾರ ಹೇಳಿಕೊಂಡಿದೆ.
ಪಂಜಾಬ್ನ ಎಂಟು ಜಿಲ್ಲೆಗಳ 250 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ಸಿಎಂ ಅಮರಿಂದರ್ ಸಿಂಗ್, ರಕ್ಷಣಾ ಕಾರ್ಯಕ್ಕಾಗಿ 100 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಯಮುನಾ ನದಿ ಪ್ರವಾಹಕ್ಕೆ ಸಿಲುಕ್ಕಿದ್ದ 8 ಮಂದಿಯನ್ನು ವಾಯುಪಡೆ ರಕ್ಷಿಸಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಉತ್ತರ ಭಾರತದಲ್ಲಿ ಭೀಕರ ಮಳೆಯಾಗುತ್ತಿದೆ. ಈ ಮಳೆ ಇನ್ನೂ ಕೆಲವು ದಿನ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.