ನವದೆಹಲಿ, ಆ.20(Daijiworld News/SS): ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಸಮಸ್ಯೆಗಳು ಮತ್ತು ಪ್ರಾದೇಶಿಕ ಪರಿಸ್ಥಿತಿಗಳ ಬಗ್ಗೆ ಮೋದಿ-ಟ್ರಂಪ್ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 30 ನಿಮಿಷಗಳ ಕಾಲ ಮೋದಿ ಟ್ರಂಪ್ ಜೊತೆ ಮಾತನಾಡಿದ್ದು, ಈ ವೇಳೆ ಭಾರತದ ವಿರುದ್ಧ ದ್ವೇಷ ಕಾರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗಳ ಬಗ್ಗೆ ಮೋದಿ ಉಲ್ಲೇಖಿಸಿದ್ದಾರೆ. ದ್ವೇಷಪೂರಿತ ಹೇಳಿಕೆಗಳು ಶಾಂತಿಗೆ ಪೂರಕವಾಗಿರುವುದಿಲ್ಲ ಎಂದು ಟ್ರಂಪ್'ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪ್ರಾದೇಶಿಕ ಪರಿಸ್ಥಿತಿ ಬಗ್ಗೆ ಕೆಲ ನಾಯಕರು ತೀವ್ರ ವಾಗ್ವಾದ ನಡೆಸುತ್ತಿರುವುದು ಮತ್ತು ಭಾರತದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ ಎಂದು ಮೋದಿ ಹೇಳಿದ್ದಾರೆ. ಅಲ್ಲದೇ ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ವಿನಾಯಿತಿ ನೀಡದೇ ಮುಕ್ತ ಪರಿಸರ ನಿರ್ವಿುಸುವ ಬಗ್ಗೆ ಮೋದಿ ತಮ್ಮ ನಿಲುವನ್ನು ಡೊನಾಲ್ಡ್ ಟ್ರಂಪ್ಗೆ ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.
ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಮೋದಿ ಮಾತನಾಡಿದ್ದಾರೆ. ಪ್ರಾದೇಶಿಕ ಪರಿಸ್ಥಿತಿಯ ವಿಷಯ ಮಾತನಾಡಿದಾಗ ಪರೋಕ್ಷವಾಗಿ ಪಾಕಿಸ್ತಾನದ ಭಾರತ ವಿರೋಧಿ ಹೇಳಿಕೆಗಳನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಶಾಂತಿಗೆ ಕೆಲವು ನಾಯಕರ ಹೇಳಿಕೆ ಪೂರಕವಾಗಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಉಭಯ ನಾಯಕರ ಮಾತುಕತೆ ಸೌಹಾರ್ದಯುತವಾಗಿತ್ತು ಎಂದಷ್ಟೇ ಹೇಳಿದೆ.