ಹೊಸದಿಲ್ಲಿ,ಆ 20 (Daijiworld News/RD): ವರುಣನ ಆರ್ಭಟ ಉತ್ತರ ಭಾರತದಲ್ಲಿ ಮುಂದುವರಿಯುತ್ತಿದ್ದು, ಗಂಗಾ, ಯಮುನ, ಸಟ್ಲೇಜ್, ಸೇರಿ ಅನೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಪಂಜಾಬ್, ಹರಿಯಾಣ ಮತ್ತು ದಿಲ್ಲಿಯಲ್ಲಿ ಪ್ರವಾಹ ಉಂಟಾಗಿದೆ.
ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭೀಕರ ಪ್ರವಾಹ ಎದುರಾಗಿದ್ದು, ಹಿಮಾಚಲ ಹಾಗೂ ಉತ್ತರಾಖಂಡ ಪ್ರದೇಶದಲ್ಲಿ ೩೫ ಕ್ಕೂ ಆದಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತದಿಂದ ರಸ್ತೆಗಳು ಕೊಚ್ಚಿ ಹೋಗಿದ್ದು ಛಾಂಬ್ರಾ, ಕಾಗ್ರಾ, ಶಿಮ್ಲಾ, ಕುಲು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅಪಾಯದ ಸ್ಥಿತಿ ತಲೆದೋರಿದೆ. ಗುಡ್ಡ ಕುಸಿದು ಕುಲು-ಮನಾಲಿ ಹೆದ್ದಾರಿ ಬಂದ್ ಆಗಿದೆ.
ಉತ್ತರ ಭಾರತದ ಈ ಆರು ರಾಜ್ಯಗಳಲ್ಲಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ರಸ್ತೆ ಕೊಚ್ಚಿ ಹೋಗಿದ್ದು, ಪ್ರವಾಹದಿಂದ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಕೃಷಿ ಸೇರಿದಂತೆ ಬೆಳೆಗಳು ನಾಶವಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಈ ನಡುವೆ ಗುಜರಾತಿನ ಕಛ್ನಲ್ಲಿ ರಿಕ್ಟರ್ ಮಾಪಕದ 4.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಆತಂಕ ಸೃಷ್ಠಿಸಿದೆ. ಈಗಾಗಲೇ ನೆರೆ ಪೀಡಿತ ಪ್ರದೇಶಗಳಲ್ಲಿ ಭೂ ಸೇನೆ, ಭಾರತೀಯ ವಾಯುಪಡೆ ಹಾಗೂ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.