ಬೆಂಗಳೂರು ಆ 20, (Daijiworld News/MSP): ಆ.20 ಮಂಗಳವಾರ ಇಂದು ಭಾರತೀಯರ ಪಾಲಿಗೆ ಮಹತ್ವದ ದಿನ. ಶ್ರೀ ಹರಿಕೋಟಾದಿಂದ ಜು. 22 ರಂದು ನಭಕ್ಕೆ ಚಿಮ್ಮಿದ ಚಂದ್ರಯಾನ 2 ನೌಕೆ ಚಂದ್ರನ ಕಕ್ಷೆ ಪ್ರವೇಶಿಸಿದೆ. ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಿತ್ತು ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಚಂದ್ರನ ಅಂಗಳವನ್ನು ನೌಕೆ ಮುತ್ತಿಕ್ಕಲು ಇನ್ನೂ ನಾಲ್ಕು ಕಾರ್ಯಾಚರಣೆ ನಡೆಯಬೇಕಿದೆ. ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಪ್ರಭಾವಳಿಯನ್ನು ಪ್ರವೇಶಿಸಿದ ಬಳಿಕ ಈ ಭಾಹ್ಯಾಕಾಶ ನೌಕೆ ತನ್ನ ಚಲನೆಯ ವೇಗವನ್ನು ಕುಂಠಿತಗೊಳಿಸುತ್ತಾ, ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ. ಬಳಿಕ ಚಂದ್ರನ ಕಕ್ಷೆಯು 100 ಕಿ.ಮೀ ಸುತ್ತ ಈ ಬಾಹ್ಯಕಾಶ ನೌಕೆ ಚಲಿಸುವಂತೆ ಮಾಡಲು ಐದು ಹಂತದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಇಂದು ಚಂದ್ರಯಾನ-2 ವೇಗವನ್ನು ತಗ್ಗಿಸಿ ದಿಕ್ಕನ್ನು ಬದಲಾಯಿಸಲಾಗುತ್ತದೆ ಹಾಗೂ ಚಂದ್ರನ ಕಕ್ಷೆಗೆ ಸೇರುತ್ತದೆ. ಸೆ.7 ರಂದು ನೌಕೆ ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ
ಇಂದು 11 ಗಂಟೆಗೆ ಇಸ್ರೋ ಸುದ್ದಿಗೋಷ್ಠೀ ಕರೆದಿದ್ದು, ಚಂದ್ರನ ಕಕ್ಷೆಗೆ ಸೇರಿಸುವ ವಿಚಾರದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.