ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಮಾರುಹೋದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ
Tue, Aug 20 2019 11:28:21 AM
ಬೆಂಗಳೂರು, ಆ.20(Daijiworld News/SS): ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ಇದೀಗ ಈ ವಿಶಿಷ್ಟ ಕಲೆಗೆ ಖ್ಯಾತ ಮಾಜಿ ಕ್ರಿಕೆಟರ್ ಹಾಗೂ ಲೆಗ್ ಸ್ಪಿನ್ನರ್ ಆಗಿರುವ ಬ್ರಾಡ್ ಹಾಗ್ ಆಕರ್ಷಿತರಾಗಿದ್ದಾರೆ.
ಕರ್ನಾಟಕ ಪ್ರೀಮಿಯರ್ ಲೀಗ್ ವೀಕ್ಷಕ ವಿವರಣೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರಾಡ್ ಹಾಗ್, ಇಲ್ಲಿನ ವಿವಿ ಪುರಂ ಕಾಲೇಜಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಬೇತಿ ಶಿಬಿರಕ್ಕೂ ಭೇಟಿ ನೀಡಿ ಚೆಂಡೆ ನುಡಿಸಿ, ಕುಣಿತ ಕಲಿಯಲೂ ಪ್ರಯತ್ನಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ಕರಾವಳಿಯ ಸರ್ವಾಂಗೀಣ ಕಲೆಯಾದ ಯಕ್ಷಗಾನದ ಕುಣಿತದ ಅಭ್ಯಾಸವನ್ನು ನೋಡಿ ಆನಂದಿಸಿದರಲ್ಲದೆ, ಅದರ ಆಕರ್ಷಣೆಗೆ ಮಾರುಹೋಗಿ, ತಾವೂ ಕುಣಿಯುವ ಬಯಕೆ ವ್ಯಕ್ತಪಡಿಸಿದರು.
ವಿವಿಪುರಂ ಕಲಾ ಕಾಲೇಜಿನಲ್ಲಿ ಕರಾವಳಿ ಕಲಾ ಪ್ರತಿಷ್ಠಾನದ ಸತೀಶ್ ಅಗ್ಪಲ ನೇತೃತ್ವದಲ್ಲಿ ನಡೆಯುವ ಸಂಕೃತಿ ಯಕ್ಷಾನುಭವ ತಂಡದಿಂದ ಯಕ್ಷಗಾನ ತರಬೇತಿ ನಡೆಯುತ್ತಿತ್ತು. ಈ ವೇಳೆ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದುದನ್ನು ಗಮನಿಸಿದ ಬ್ರಾಡ್ ಹಾಗ್, ತಮಗೂ ಕಲಿಸುವಂತೆ ಕೇಳಿಕೊಂಡರು. ಬಳಿಕ ತಾನೂ ಕೂಡ ಯಕ್ಷಗಾನದ ತಾಳಕ್ಕೆ ಅನುಗುಣವಾಗಿ ಹೆಜ್ಜೆಯನ್ನೂ ಹಾಕಿ ಸಂಭ್ರಮಿಸಿದರು.
ಕೇವಲ ಯಕ್ಷಗಾನದ ಹೆಜ್ಜೆಗಾರಿಕೆ ಮಾತ್ರವಲ್ಲ, ಚೆಂಡೆಯನ್ನು ಹೆಗಲಿಗೇರಿಸಿದ ಅವರು ಸಲೀಸಾಗಿ ಅದರಿಂದ ಸ್ವರ ಹೊರಡಿಸುವಲ್ಲಿಯೂ ಯಶಸ್ವಿಯಾದರು.