ಬೆಂಗಳೂರು, ಆ.20(Daijiworld News/SS): ಆಗಸ್ಟ್ 23ರಿಂದ ರಾಜ್ಯದಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮರು ಪ್ರಾರಂಭಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಪುನರ್ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಇದರಿಂದಾಗಿ ಹಲವಾರು ಕಾರಣಗಳಿಂದ ಎರಡು ವರ್ಷಗಳಿಂದ ಪದೇ ಪದೆ ಮುಂದೂಡಲ್ಪಡುತ್ತಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಕೊನೆಗೂ ಮುಕ್ತಿ ದೊರೆಯುವ ನಿರೀಕ್ಷೆ ಹೊಂದಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ, ರಾಜ್ಯ ಪಾಥಮಿಕ ಮತ್ತು ಪ್ರೌಢ ಶಿಕ್ಷಕರ ವರ್ಗಾವಣೆ ಹೋರಾಟ ಸಮಿತಿ ಸಂಚಾಲಕ ಮಾಲತೇಶ್ ಬಬ್ಟಾಜಿ, ಮುಖ್ಯಮಂತ್ರಿಗಳ ಕಾಳಜಿ ಸ್ವಾಗತಾರ್ಹ. ಆದರೆ 2017ರ ಶಿಕ್ಷಕರ ವರ್ಗಾವಣೆ ಕಾಯ್ದೆ ಅವೈಜ್ಞಾನಿಕವಾಗಿದ್ದು, ಈ ಹಿಂದೆ ಜಾರಿಯಲ್ಲಿದ್ದ 2007ರ ವರ್ಗಾವಣೆ ಕಾಯ್ದೆ ಅನ್ವಯ ಪ್ರಕ್ರಿಯೆ ನಡೆಯಲಿ ಎಂದು ಮನವಿ ಮಾಡಿದ್ದಾರೆ.