ಬೆಂಗಳೂರು, ಆ.20(Daijiworld News/SS): ಚಂದ್ರಯಾನ-2 ಕಂಡುಹಿಡಿಯುವ ಮಾಹಿತಿಯ ಬಗ್ಗೆ ತಿಳಿಯಲು ಜಗತ್ತೇ ಕುತೂಹಲದಿಂದ ಕಾಯುತ್ತಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಯಾನ-2 ಮಂಗಳವಾರ ಬೆಳಿಗ್ಗೆ ಭೂಕಕ್ಷೆಯಿಂದ ಚಂದ್ರನ ಕಕ್ಷಗೆ ಚಲಿಸಿದೆ. ಸೆ.7ರಂದು ನಸುಕಿನ 1.55ಕ್ಕೆ ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಇದುವರೆಗೆ ಚಂದ್ರಯಾನ ಯೋಜನೆಯಂತೆಯೇ ಸಾಗಿದೆ. ಸೆ.2ರಿಂದ ಬಹಳ ಮಹತ್ವದ ಘಟ್ಟ ಆರಂಭವಾಗುತ್ತದೆ ಎಂದು ತಿಳಿಸಿದರು.
ಚಂದ್ರನ ದಕ್ಷಿಣ ಧ್ರುವಕ್ಕೆ ಇದುವರೆಗೆ ಯಾರೂ ತೆರಳಿಲ್ಲ. ಹೀಗಾಗಿ ಚಂದ್ರಯಾನ-2 ಕಂಡುಹಿಡಿಯುವ ಮಾಹಿತಿಯ ಬಗ್ಗೆ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. 21, 28, 30 ಮತ್ತು ಸೆ.1ರಂದು ಉಡಾವಣೆಗಳು ನಡೆಯುತ್ತವೆ. ಆಗ ಚಂದ್ರಯಾನ 18 ಸಾವಿರ ಕಿ.ಮೀ.ನಿಂದ 100 ಕಿ.ಮೀ.ಸಮೀಪಕ್ಕೆ ಬಂದಿರುತ್ತದೆ. ಸೆ.2ರಂದು ಆರ್ಬಿಟರ್ನಿಂದ ಲ್ಯಾಂಡರ್ ಪ್ರತ್ಯೇಕಗೊಳ್ಳುತ್ತದೆ. ಬಳಿಕ ನಾಲ್ಕು ದಿನಗಳ ಕಾಲ ಲ್ಯಾಂಡರ್ ನಿಧಾನವಾಗಿ ಚಂದ್ರನ ನೆಲದತ್ತ ಸಾಗುತ್ತದೆ. ಇಳಿಯುವ ಜಾಗವನ್ನು ಅಂದಾಜಿಸುತ್ತದೆ ಎಂದು ತಿಳಿಸಿದರು.
ಸೆ.7ರ ನಸುಕಿನ 1.40ಕ್ಕೆ ಲ್ಯಾಂಡರ್ ಚಂದ್ರನ ನೆಲವನ್ನು ಸೇರುತ್ತದೆ. ಇದು 15 ನಿಮಿಷದ ಪ್ರಕ್ರಿಯೆ. ಹೀಗಾಗಿ 1.55ಕ್ಕೆ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇರುತ್ತದೆ. 2 ಗಂಟೆ ಬಳಿಕ ರಾಂಪ್ ತೆರೆದುಕೊಳ್ಳುತ್ತದೆ. 3 ಗಂಟೆ ಬಳಿಕ ಸೋಲಾರ್ ಪ್ಯಾನಲ್ ತೆರೆದುಕೊಳ್ಳುತ್ತದೆ . ಬಳಿಕ ರೋವರ್ ಹೊರಗೆ ಬರುತ್ತದೆ. ಒಟ್ಟಾರೆ ಐದಾರು ಗಂಟೆಯೊಳಗೆ ಎಲ್ಲ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಹೇಳಿದರು.
ಶುಕ್ಲಪಕ್ಷದ 14 ದಿನಗಳ ಕಾಲ ಲಾಂಡರ್ ಮತ್ತು ರೋವರ್ ಹಲವು ಸಂಶೋಧನೆಗಳನ್ನು ನಡೆಸಲಿವೆ. ರೋವರ್ ಸೆಕೆಂಡ್ಗೆ 1 ಸೆಂ.ಮೀನಂತೆ ಒಟ್ಟು 500 ಮೀಟರ್ನಷ್ಟು ಚಲಿಸಿ ನೀರು, ಖನಿಜ, ಕಂಪನ ಸಹಿತ ಹಲವಾರು ನಗೆಯ ಸಂಶೋಧನೆ ನಡೆಸಲಿದೆ. ಆರ್ಬಿಟರ್ ಒಂದು ವರ್ಷ ಕಾಲ ಚಂದ್ರನ ಸುತ್ತ ತಿರುಗುತ್ತ ಇರಲಿದೆ ಎಂದು ಹೇಳಿದರು.