ನವದೆಹಲಿ, ಆ.20(Daijiworld News/SS): ಭಾರತದ ಮೇಲೆ ದಾಳಿ ಮಾಡುವ ಹುಚ್ಚು ಧೈರ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗಡಿಯಲ್ಲಿ ಭಾರತೀಯ ವಾಯುಪಡೆ ಸದಾ ದಾಳಿಗೆ ಸನ್ನದ್ಧವಾಗಿರುತ್ತದೆ ಎಂಬುದನ್ನು ಶತ್ರು ರಾಷ್ಟ್ರಗಳು ಮರೆಯಬಾರದು. ಶತ್ರು ಪಾಳೆಯದವರು ದಾಳಿ ಮಾಡುವ ಸನ್ನಾಹ ತೋರಲಿ, ಬಿಡಲಿ, ಭಾರತೀಯ ವಾಯು ಪಡೆ ಮಾತ್ರ ದಾಳಿ ಮಾಡಲು ಸದಾ ಸನ್ನದ್ಧವಾಗಿರುತ್ತದೆ. ಶತ್ರು ರಾಷ್ಟ್ರದ ನಾಗರಿಕ ವಿಮಾನಗಳು ಕೆಲವೊಮ್ಮೆ ವಾಯು ಗಡಿಯನ್ನು ಉಲ್ಲಂಘಿಸುತ್ತವೆ. ಆದ್ದರಿಂದ, ನಾವು ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ನಿವೃತ್ತಿ ಹೊಂದಲಿರುವ ಸೇನಾಪಡೆಯ ಅಧಿಕಾರಿಗಳ ವಿಚಾರಸಂಕಿರಣದಲ್ಲಿ ಮಾತನಾಡಿದ ಭಾರತೀಯ ಪದಾತಿ ದಳದ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತದ ಮೇಲೆ ಯುದ್ಧ ಸಾರಿದ್ದೇ ಆದಲ್ಲಿ, ಮುಖಕ್ಕೆ ಗುದ್ದಿ ಕಳುಹಿಸುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ಅಂಥ ಯಾವುದೇ ಹುಚ್ಚು ದುಸ್ಸಾಹಸಕ್ಕೆ ಕೈ ಹಾಕದಂತೆ ಶತ್ರು ರಾಷ್ಟ್ರಕ್ಕೆ ಸಲಹೆ ನೀಡಿದ್ದರು.