ಬೆಂಗಳೂರು,ಆ 20 (Daijiworld News/RD): ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಉತ್ಸಾಹದಲ್ಲಿ ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ ಎಸ್ ಮಾಧುಸ್ವಾಮಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ ಎಂದು ಯಡವಟ್ಟಾಗಿ ಉಚ್ಛರಿಸಿ ಪೇಚಿಗೆ ಸಿಲುಕಿದರು.
ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 26 ದಿನಗಳ ಕಳೆದಿದ್ದು, 17 ಶಾಸಕರು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮ ಇಂದು ರಾಜಭವನದಲ್ಲಿ ನಡೆಯಿತು. ಈ ವೇಳೆ ಹಲವು ಶಾಸಕರಿಗೆ ನಿರಾಸೆಯುಂಟಾದರೆ, ಇನ್ನು ಕೆಲವು ಶಾಸಕರಿಗೆ ಅದೃಷ್ಠ ಕದ ತಟ್ಟಿದಂತೆ ಆಗಿದೆ. ಹೀಗಾಗಿ ಮೊದಲ ಬಾರಿಗೆ ಆಯ್ಕೆಯಾದ ಸಚಿವರಾಗಿ ಆಯ್ಕೆಯಾದ ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿಎಸ್ ಮಾಧುಸ್ವಾಮಿ ಪ್ರಮಾಣ ವಚನ ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದು, ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸುವ ವೇಳೆ ಅವರು 'ನಾನು... ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ' ಎಂದು ಹೇಳುವ ಬದಲು, 'ನಾನು ಮುಖ್ಯಮಂತ್ರಿಯಾಗಿ...' ಎಂದು ಉಚ್ಚರಿಸಿದ್ದು, ಯಡವಟ್ಟಿಗೆ ಕಾರಣವಾಗಿದೆ.
ಮೈತ್ರಿ ಸರ್ಕಾರ ಆಡಳಿತ ಅವಧಿಯಲ್ಲಿ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆದ ಸಂದರ್ಭದಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ನ 104 ಶಾಸಕರ ವಿರುದ್ದ ಮಾಧುಸ್ವಾಮಿ ಮಾತನಾಡಿ ಶಾಸಕರಿಗೆ ಚಾಟಿ ಏಟು ಬೀಸಿದ್ದರು. ಕಾನೂನು ಹಾಗೂ ಉತ್ತಮ ಅನುಭವ ಹೊಂದಿರುವ ವ್ಯಕ್ತಿತ್ವದ ಮಾಧುಸ್ವಾಮಿ ಬಿಜೆಪಿಯ ಶಕ್ತಿಯಾಗಿದ್ದಾರೆ. ವಿಧಾನಸಭೇಯಲ್ಲಿ ಅವರ ಮಾತಿನ ವೈಖರಿಗೆ ಆಡಳಿತ ಪಕ್ಷದವರೂ ಕೂಡ ತಲೆದೂಗಿದ್ದರು. ಜೊತೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಇವರ ಹೆಸರು ಕೂಡ ಕೇಳಿಬಂದಿದ್ದು ಇಲ್ಲಿ ಉಲ್ಲೇಖಿಸಬಹುವುದು. ಹೀಗಾಗಿ ಮಾಧುಸ್ವಾಮಿ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವುದು ಮೊದಲೇ ಖಚಿತವಾಗಿತ್ತು. ಅದರಂತೆ ಮುಖ್ಯಮಂತ್ರಿ ಮಾಧುಸ್ವಾಮಿ ಅವರನ್ನು ಕೃಷಿ ಮಂತ್ರಿಯಾಗಿ ನೇಮಕ ಮಾಡಿದ್ದಾರೆ.