ಬೆಂಗಳೂರು,ಏ. 18 (DaijiworldNews/AK): ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆಯ ತತ್ವವನ್ನು ವಿರೋಧಿಸಿದಂತೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ತಿಳಿಸಿದರು. ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ವಿಪಕ್ಷಗಳ ಮಹಿಳಾ ವಿರೋಧಿ ನೀತಿಯನ್ನು ಖಂಡಿಸುವುದಾಗಿ ಹೇಳಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಅವಕಾಶ ಇತ್ತು ಎಂದು ವಿವರಿಸಿದರು.
ಮಹಿಳೆಯರಿಗೆ ರಾಜಕೀಯದಲ್ಲಿ ಪ್ರವೇಶ ಸಿಗುವುದೆಂದರೆ ಅದು ಅವರ ಹಕ್ಕು. ಅದನ್ನು ವಿರೋಧಿಸುವುದು ಸಮಾನತೆಯ ವಿರುದ್ಧ ಎಂದು ನುಡಿದರು. ಹಣಕಾಸಿನ ವ್ಯವಹಾರ ಸರಿ ಮಾಡದೇ, ವಿದ್ಯುತ್ ದರವನ್ನು ಹುಚ್ಚಾಬಟ್ಟೆ ಏರಿಸಿದ್ದು ಖಂಡಿತ ಸರಿಯಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಈ ನಿರ್ಧಾರವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಜನರು ನೆಮ್ಮದಿ, ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.