ಪುಣೆ, ಏ. 18 (DaijiworldNews/TA) : ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣನಲ್ಲಿ ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದ ರನ್ವೇ ಮೇಲೆ ತುರ್ತು ಭೂಸ್ಪರ್ಶ ಮಾಡಿದ್ದು, ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.

ಶುಕ್ರವಾರ ರಾತ್ರಿ ಸುಮಾರು 10:25ರ ವೇಳೆಗೆ ವಾಡಿಕೆಯ ತರಬೇತಿ ಹಾರಾಟದ ಬಳಿಕ ಲ್ಯಾಂಡಿಂಗ್ ವೇಳೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದ ಅಡಿಭಾಗದ ಚಕ್ರಗಳ ವ್ಯವಸ್ಥೆ (ಅಂಡರ್ಕ್ಯಾರೇಜ್) ದೋಷಗೊಂಡ ಪರಿಣಾಮ ಅದು ರನ್ವೇ ಮೇಲೆಯೇ ನಿಂತುಬಿಟ್ಟಿತ್ತು. ಅದೃಷ್ಟವಶಾತ್, ವಿಮಾನದಲ್ಲಿದ್ದ ಪೈಲಟ್ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.
ಭಾರತೀಯ ವಾಯುಪಡೆ ಪ್ರಕಟಣೆ ನೀಡಿ, “ವಿಮಾನದಲ್ಲಿದ್ದ ಸಿಬ್ಬಂದಿ ಸಂಪೂರ್ಣ ಸುರಕ್ಷಿತರಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ. ಅಗತ್ಯ ಭದ್ರತಾ ಪರಿಶೀಲನೆಗಳ ನಂತರ ವಿಮಾನಯಾನವನ್ನು ಪುನಃ ಆರಂಭಿಸಲಾಗಿದೆ” ಎಂದು ತಿಳಿಸಿದೆ.
ಪುಣೆ ವಿಮಾನ ನಿಲ್ದಾಣವು ಲೋಹೆಗಾಂವ್ ವಾಯುಪಡೆ ನಿಲ್ದಾಣ ಜೊತೆ ಸಂಯುಕ್ತವಾಗಿ ಕಾರ್ಯನಿರ್ವಹಿಸುವುದರಿಂದ, ಸುರಕ್ಷತಾ ಕ್ರಮವಾಗಿ ತಕ್ಷಣವೇ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್ವೇ ತೆರವುಗೊಳಿಸಲು ಸುಮಾರು 4 ರಿಂದ 6 ಗಂಟೆಗಳ ಕಾಲ ತೆಗೆದುಕೊಂಡಿತು.
ಈ ಅವಧಿಯಲ್ಲಿ ಅನೇಕ ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದುಪಡಿಸಲಾಯಿತು. ಇಂಡಿಗೊ 31 ಆಗಮನ ಮತ್ತು 34 ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದರೆ, ಏರ್ ಇಂಡಿಯಾ 3 ಆಗಮನ ಮತ್ತು 3 ನಿರ್ಗಮನಗಳನ್ನು ರದ್ದುಪಡಿಸಿತು. ಸ್ಪೈಸ್ ಜೆಟ್ ಮತ್ತು ಆಕಾಶ ಏರ್ ತಲಾ ಹಲವು ವಿಮಾನಗಳನ್ನು ರದ್ದುಪಡಿಸಿದವು. ಜೊತೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೂಡ ಅನೇಕ ಸೇವೆಗಳನ್ನು ರದ್ದುಪಡಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಪರಿಸ್ಥಿತಿಯನ್ನು ಪರಿಶೀಲಿಸಿ, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದರು. ಬಳಿಕ ಯುದ್ಧ ವಿಮಾನವನ್ನು ತೆರವುಗೊಳಿಸಿ, ರನ್ವೇ ಪರಿಶೀಲನೆ ನಡೆಸಿದ ನಂತರ ಶನಿವಾರ ಬೆಳಗಿನ ಜಾವದಿಂದ ಕಾರ್ಯಾಚರಣೆ ಪುನರಾರಂಭಗೊಂಡಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ಸಂಸ್ಥೆ ಪ್ರಯಾಣ ಸಲಹೆ ಹೊರಡಿಸಿದ್ದು, ವಿಮಾನದ ಸ್ಥಿತಿಯನ್ನು ಪರಿಶೀಲಿಸಿ ಬಳಿಕವೇ ವಿಮಾನ ನಿಲ್ದಾಣಕ್ಕೆ ಬರಲು ಮನವಿ ಮಾಡಿದೆ. ಪರ್ಯಾಯ ಬುಕ್ಕಿಂಗ್ ಅಥವಾ ಪೂರ್ಣ ಹಣ ಮರುಪಾವತಿ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಅಧಿಕಾರಿಗಳು, ಇಂತಹ ತುರ್ತು ಪರಿಸ್ಥಿತಿಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.