ಬೆಂಗಳೂರು, ಏ. 18 (DaijiworldNews/AK): ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಆಗಬೇಕು ಅಂತ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ಜಿಕೆವಿಕೆಯಲ್ಲಿ ನಡೆದ ದ್ವೈವಾರ್ಷಿಕ 22ನೇ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಅವಶ್ಯಕತೆ ಇದೆ ಅಂತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರತಿಪಾದಿಸಿದರು.
ಸಮ್ಮೇಳನದಲ್ಲಿ ಮಾತಾಡಿದ ಅವರು, ಜಗತ್ತಿನ ಸಂಸ್ಥೆಗಳು ತಾಂತ್ರಿಕ ಬದಲಾವಣೆಗಳಿಂದ ರೂಪಾಂತರಗೊಳ್ಳುತ್ತಿರುವ ಈ ಸಮಯದಲ್ಲಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ನ್ಯಾಯಾಂಗದ ಮರುಕಲ್ಪನೆ ಎಂಬ ಈ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಕಾನೂನು ಮತ್ತು ತಂತ್ರಜ್ಞಾನ ಬೇರೆ ಬೇರೆ ಕ್ಷೇತ್ರಗಳಲ್ಲ, ಪರಸ್ಪರ ಸಂಬಂಧ ಹೊಂದಿರುವ ಶಕ್ತಿಗಳಾಗಿವೆ. ಕೃತಕ ಬುದ್ಧಿಮತ್ತೆ ಸಾಕ್ಷ್ಯಗಳ ವಿಶ್ಲೇಷಣೆ, ವಾಸ್ತವಾಂಶಗಳ ಅರ್ಥೈಸುವಿಕೆ ಮತ್ತು ತೀರ್ಪು ನೀಡುವ ವಿಧಾನಗಳನ್ನು ಬದಲಾಯಿಸುವ ಶಕ್ತಿಯಾಗಿದೆ. ಇದು ವೇಗವಾದ ಕಾನೂನು ಸಂಶೋಧನೆ, ಉತ್ತಮ ಪ್ರಕರಣ ನಿರ್ವಹಣೆ ಮತ್ತು ಬಾಕಿ ಇರುವ ಪ್ರಕರಣಗಳ ಕಡಿತಕ್ಕೆ ಸಹಾಯ ಮಾಡುತ್ತದೆ. ಆದರೆ ಇದರಿಂದ ಕೆಲ ಸಮಸ್ಯೆಗಳೂ ಉಂಟಾಗುತ್ತವೆ. ಆಲ್ಗಾರಿಥಮ್ಗಳ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯನ್ನು ಹಾನಿಗೊಳಿಸಬಹುದು. ಸ್ಪಷ್ಟತೆ ಇಲ್ಲದ ವ್ಯವಸ್ಥೆಗಳು ನ್ಯಾಯಾಂಗದ ತೀರ್ಪುಗಳ ಮೂಲತತ್ವವನ್ನು ದುರ್ಬಲಗೊಳಿಸಬಹುದು ಎಂದರು.
AI ಮೂಲಕ ಸೃಷ್ಟಿಯಾದ ಸಾಕ್ಷ್ಯಗಳು ಹೊಸ ಸವಾಲುಗಳನ್ನು ತಂದಿವೆ. ಡೀಪ್ಫೇಕ್ಗಳು ಮತ್ತು ಕೃತಕ ಡೇಟಾ ನ್ಯಾಯಾಂಗಕ್ಕೆ ಹೊಸ ಪ್ರಶ್ನೆಗಳನ್ನು ಎತ್ತುತ್ತವೆ. ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಸಾಕ್ಷ್ಯ ಎಂದರೇನು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಬೇಕಾಗಿದೆ. ಕೃತಕ ಬುದ್ಧಿಮತ್ತೆ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವಲ್ಲಿ ನ್ಯಾಯಾಂಗ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.