ನವದೆಹಲಿ, ಏ. 18 (DaijiworldNews/AA): ರಾಹುಲ್ ಗಾಂಧಿ ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.

"ರಾಹುಲ್ ಗಾಂಧಿ ತಮ್ಮದೇ ಸಂಸದರ ಮುಂದೆ ನಗೆಪಾಟಲೀಗೀಡಾಗಿದ್ದಾರೆ. ಉದಾಹರಣೆಗಳನ್ನು ನೀಡುವ ಭರದಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ತಮ್ಮ ಜೊತೆ ಎಳೆದುಕೊಂಡು ಮಿತಿ ಮೀರಿ ವರ್ತಿಸಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಈ ಮೂಲಕ ಅವರ ಪಕ್ಷದಿಂದ ಮೊದಲ ಬಾರಿಗೆ ಸಂಸದರಾದವರ ಮುಂದೆ ತಮ್ಮ ಗೌರವವನ್ನು ತಾವೇ ಕೆಳಗೆ ಹಾಕಿಕೊಂಡಿದ್ದಾರೆ. ಕಿರಿಯ ಸಂಸದರ ಮುಂದೆ ನಗೆಪಾಟಲಿಗೀಡಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಭಾಷಣದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವು ನಿರ್ಣಾಯಕ ಪಾತ್ರವನ್ನು ಹೊಂದಿದೆ" ವಾಗ್ದಾಳಿ ನಡೆಸಿದ್ದಾರೆ.
"ಆದರೆ ನನಗೆ ಹೆಂಡತಿಯ ಸಮಸ್ಯೆಯಿಲ್ಲ ಎನ್ನುತ್ತಾ ಲೋಕಸಭಾ ವಿರೋಧ ಪಕ್ಷದ ನಾಯಕರೊಬ್ಬರು ಸದನದಲ್ಲಿ ತನ್ನನ್ನು ತಾನೇ ಅಪಹಾಸ್ಯ ಮಾಡಿಕೊಳ್ಳಲು ಬಯಸಿದರೆ, ಅವರು ಕೇವಲ ಹಾಸ್ಯ ಭಾಷಣಗಳನ್ನು ನೀಡಲು ಬಯಸಿದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಯೋಗ್ಯರಲ್ಲ ಎಂದು ನನಗೆ ಅನಿಸುತ್ತದೆ" ಎಂದರು.