ನವದೆಹಲಿ, ಏ. 18 (DaijiworldNews/AA): ರಾಷ್ಟ್ರ ರಾಜಧಾನಿಯಲ್ಲಿ ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸ್ಕೆಚ್ ಹಾಕಿದ್ದ ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರದ ನಾಲ್ವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

"ಜನದಟ್ಟಣೆಯ ಸ್ಥಳಗಳನ್ನು ಗುರಿಯಾಗಿಸಿ ಐಇಡಿ ಅಳವಡಿಸಲಾದ ರಿಮೋಟ್-ನಿಯಂತ್ರಿತ ಟಾಯ್ ಕಾರನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ಇಬ್ಬರು ಆರೋಪಿಗಳು ತೊಡಗಿಸಿಕೊಂಡಿದ್ದರು. ವಿಶೇಷ ದಳವು ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಇಬ್ಬರು ಮತ್ತು ಒಡಿಶಾ ಮತ್ತು ಬಿಹಾರದಿಂದ ತಲಾ ಒಬ್ಬ ಆರೋಪಿಗಳನ್ನು ಬಂಧಿಸಿದೆ. ಇನ್ನು ಕಾರ್ಯಾಚರಣೆ ವೇಳೆ ಸುಧಾರಿತ ಸ್ಫೋಟಕ ಸಾಧನ ಮೊಬೈಲ್, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ನಾಲ್ವರು ಖಲೀಫತ್ ಸ್ಥಾಪನೆಯ ಆಲೋಚನೆಯೊಂದಿಗೆ ಉಗ್ರಗಾಮಿ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು ಮತ್ತು 'ಘಜ್ವಾ-ಎ-ಹಿಂದ್' ನಂತಹ ನಂಬಿಕೆ ಪ್ರಚಾರ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಖುರಾಸಾನ್ನ ಲಷ್ಕರ್' ಪರಿಕಲ್ಪನೆಯಿಂದ ಪ್ರೇರಿತರಾಗಿದ್ದ ಆರೋಪಿಗಳು ಇತರರನ್ನು ಮತಾಂಧರನ್ನಾಗಿ ಮಾಡಲು ಕಪ್ಪು ಧ್ವಜ ಹಿಡಿದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭೀತಿ ಮತ್ತು ಮಾನಸಿಕ ಪರಿಣಾಮವನ್ನು ಹೆಚ್ಚಿಸಲು ಜನದಟ್ಟಣೆಯ ಸಾರ್ವಜನಿಕ ಸ್ಥಳಗಳು ಮತ್ತು ಪಾರಂಪರಿಕ ಕಟ್ಟಡಗಳ ಮೇಲೆ ದಾಳಿ ನಡೆಸಲು ಈ ಗುಂಪು ಸಂಚು ರೂಪಿಸಿತ್ತು. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರ ಸಹಚರರು, ನಿರ್ವಾಹಕರು ಮತ್ತು ಜಾಲದ ಬಗ್ಗೆ ಮಾಹಿತಿ ತಿಳಿಯಲು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಭದ್ರತಾ ಪಡೆಗಳು ಹೇಳಿವೆ.