ಹಾಸನ, ಏ. 18 (DaijiworldNews/AK): 2011ರಲ್ಲಿ ಸಕಲೇಶಪುರ ಜೈಲಿನಿಂದ ನಾಪತ್ತೆಯಾಗಿದ್ದ ವಿಚಾರಣಾಧೀನ ಖೈದಿಯನ್ನು ಹದಿನೈದು ವರ್ಷಗಳ ನಂತರ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ಚನ್ನಕೇಶವ @ ಕೇಶವ@ ಸುರೇಶ ಬಿನ್ ಲೇಟ್ ಸಣ್ಣೇಗೌಡ ಎಂದು ಗುರುತಿಸಲಾಗಿದೆ.
ಈತ ಈ ಹಿಂದೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಬಂಧಿತನಾಗಿ ಸಕಲೇಶಪುರ ಜೈಲು ಸೇರಿದ್ದನು. 2011ರಲ್ಲಿ ಸಕಲೇಶಪುರ ಜೈಲಿನಲ್ಲಿದ್ದ ಈತ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದನು. ಅಂದಿನಿಂದ ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದರು.
ಜೈಲಿನಿಂದ ತಪ್ಪಿಸಿಕೊಂಡ ನಂತರ ಚನ್ನಕೇಶವ ತನ್ನ ಗುರುತು ಸಿಗದಂತೆ ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಅಲೆದಾಡಿದ್ದನು. ಈ ವೇಳೆ ವಿವಿಧ ಹೋಟೆಲ್ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ಇತ್ತೀಚೆಗೆ ಗೋವಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.
ಆರೋಪಿ ಗೋವಾದಲ್ಲಿರುವ ಬಗ್ಗೆ ಹಾಸನ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಗೋವಾಕ್ಕೆ ಧಾವಿಸಿ, ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಚನ್ನಕೇಶವನನ್ನು ವಶಕ್ಕೆ ಪಡೆದಿದೆ. ಸದ್ಯ ಆರೋಪಿಯನ್ನು ಹಾಸನಕ್ಕೆ ಕರೆತಂದು ಮತ್ತೆ ಜೈಲಿಗಟ್ಟಲಾಗಿದೆ.