ಬಿಹಾರ, ಏ. 19 (DaijiworldNews/AK): ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಅಲ್ಲಿ ಟಾಪರ್ ಆಗುವುದು ಸಾಮಾನ್ಯದ ಮಾತಲ್ಲ. ಅದರಲ್ಲೂ ಹಳ್ಳಿ ಹಿನ್ನೆಲೆಯಲ್ಲಿ ಬೆಳೆದ ಯುವಕ ಶುಭಂ ಕುಮಾರ್ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ.

ಐಎಎಸ್ ಶುಭಂ ಕುಮಾರ್ ಬಿಹಾರದ ಕತಿಹಾರ್ ನಿವಾಸಿ. ಅವರು 2020 ರಲ್ಲಿ ನಡೆದ UPSC ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ . ಶುಭಂ ಕುಮಾರ್ ಬಾಲ್ಯದಿಂದಲೂ ತುಂಬಾ ಚುರುಕಾಗಿದ್ದರು. ಆದರೂ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವರಿಗೆ ಸವಾಲಿನದ್ದು ಆಗಿತ್ತು. ಶುಭಂ ಬಿಹಾರದ ಕತಿಹಾರ್ ನ ಕಡ್ವಾ ಬ್ಲಾಕ್ ನ ಕುಮ್ಹಾರಿ ಗ್ರಾಮದವರು. ಬೊಕಾರೊ ಶಾಲೆಯಿಂದ 12 ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಗ್ರಾಮೀಣ ಪರಿಸರದಲ್ಲಿ ಬೆಳೆದ ಶುಭಂ ಅವರಿಗೆ ಬಾಲ್ಯದಿಂದಲೂ ನಾಗರಿಕ ಸೇವೆಗೆ ಸೇರಬೇಕೆಂಬ ಆಸೆ ಇತ್ತು.
ಶುಭಂ ಕುಮಾರ್ ಐಐಟಿ ಬಾಂಬೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದಾರೆ. ಡಿಗ್ರಿ ಅಂತಿಮ ವರ್ಷದಲ್ಲೇ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಓದಿನ ಭಾಗವಾಗಿ ಕಂಪನಿಯೊಂದರಲ್ಲಿ ಇಂಟರ್ನ್ ಶಿಪ್ ಮಾಡಿದರು. ಅದೇ ಕಂಪನಿಯಿಂದ ಉದ್ಯೋಗದ ಆಫರ್ ಸಿಕ್ಕಿತ್ತು. ಆದರೆ ಶುಭಂ ಅವರು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಆದ್ದರಿಂದ ಐಐಟಿ ಬಾಂಬೆಯ ಪ್ಲೇಸ್ ಮೆಂಟ್ ಗಾಗಿ ಕಾದು ಕುಳಿತುಕೊಳ್ಳಲಿಲ್ಲ.
ಶುಭಂ ಕುಮಾರ್ 2018ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ನಂತರ 2019 ರಲ್ಲಿ ಅವರು 290 ನೇ ರ್ಯಾಂಕ್ ಪಡೆದರು. ಅವರು ಭಾರತೀಯ ರಕ್ಷಣಾ ಖಾತೆ ಸೇವೆಯಲ್ಲಿ ಆಯ್ಕೆಯಾದರು. ಆದರೆ ಶುಭಂ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. 2020 ರಲ್ಲಿ ಅವರು ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾದರು. ಈ ವೇಳೆ ಅವರು ಅಗ್ರ 100ರೊಳಗೆ ಬರುತ್ತಾರೆ ಎಂದು ತಿಳಿದಿದ್ದರು. ಆದರೆ ಫಸ್ಟ್ ರ್ಯಾಂಕ್ ನೊಂದಿಗೆ ಆಲ್ ಇಂಡಿಯಾ ಟಾಪರ್ ಆಗಿ ಹೊರಹೊಮ್ಮಿದರು.