ನವದೆಹಲಿ, ಏ. 20 (DaijiworldNews/TA): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಎಲ್ಪಿಜಿ ಬಳಕೆ ಗಣನೀಯವಾಗಿ ಕುಸಿದಿದೆ. ಪೂರೈಕೆ ಸರಪಳಿಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಮಾರ್ಚ್ ತಿಂಗಳಲ್ಲಿ LPG ಬಳಕೆ ಶೇ.13ರಷ್ಟು ಕಡಿಮೆಯಾಗಿದೆ.

ಅಂಕಿಅಂಶಗಳ ಪ್ರಕಾರ, ಕಳೆದ ವರ್ಷದ ಇದೇ ಅವಧಿಯಲ್ಲಿ 2.729 ದಶಲಕ್ಷ ಟನ್ LPG ಬಳಕೆಯಾಗಿದ್ದರೆ, ಈ ವರ್ಷದ ಮಾರ್ಚ್ನಲ್ಲಿ ಅದು 2.379 ದಶಲಕ್ಷ ಟನ್ಗೆ ಇಳಿಕೆಯಾಗಿದೆ. ಈ ಮಾಹಿತಿಯನ್ನು ಪೆಟ್ರೋಲಿಯಂ ಪ್ಲಾನಿಂಗ್ ಅನಾಲಿಸಿಸ್ ಸೆಲ್ (ಪಿಪಿಎಸಿ) ಬಿಡುಗಡೆ ಮಾಡಿದೆ. ಭಾರತ ತನ್ನ ಒಟ್ಟು LPG ಬೇಡಿಕೆಯ ಸುಮಾರು ಶೇ.60 ರಷ್ಟು ಆಮದು ಮಾಡಿಕೊಳ್ಳುತ್ತದೆ.
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊರ್ಮಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಸಂಚಾರಕ್ಕೆ ಅಡಚಣೆ ಉಂಟಾಗಿರುವುದು ಪೂರೈಕೆಗೆ ದೊಡ್ಡ ಹೊಡೆತ ನೀಡಿದೆ. ಈ ಜಲಸಂಧಿ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ಉಂಟಾದ ಅಡಚಣೆಗಳು ನೇರವಾಗಿ ಭಾರತದಂತಹ ಆಮದು ಅವಲಂಬಿತ ದೇಶಗಳ ಮೇಲೆ ಪರಿಣಾಮ ಬೀರುತ್ತಿವೆ.
LPG ಕೊರತೆಯ ಪರಿಣಾಮ ಗೃಹೇತರ ವಿಭಾಗಗಳಲ್ಲಿ ಹೆಚ್ಚು ತೀವ್ರವಾಗಿ ಕಂಡುಬಂದಿದೆ. ವಾಣಿಜ್ಯ ಬಳಕೆದಾರರಿಗೆ ಮಾರಾಟವು ಸುಮಾರು ಶೇ.48ರಷ್ಟು ಕುಸಿದಿದ್ದು, ಬೃಹತ್ ಪ್ರಮಾಣದ ಬಳಕೆ ಶೇ.75.5ರಷ್ಟು ಕುಸಿದಿದೆ. ಪೂರೈಕೆ ಸಮಸ್ಯೆಗಳು ಮುಂದುವರಿದರೆ, ಮುಂದಿನ ತಿಂಗಳಲ್ಲಿ ಕೂಡ LPG ಬಳಕೆ ಮತ್ತು ಲಭ್ಯತೆ ಮೇಲೆ ಪರಿಣಾಮ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.