ಕೇರಳ, ಏ. 20 (DaijiworldNews/TA): ಸಾಮಾನ್ಯ ವಿಚಾರದಿಂದ ಆರಂಭವಾದ ಜಗಳ ಭೀಕರ ಅಂತ್ಯ ಕಂಡಿದ್ದು, ಕೋಳಿ ಲಿವರ್ ಹಂಚಿಕೊಳ್ಳುವ ವಿಚಾರದಲ್ಲಿ ಉಂಟಾದ ಘರ್ಷಣೆಯಲ್ಲಿ 45 ವರ್ಷದ ವ್ಯಕ್ತಿಯನ್ನು ಅವರ ಸೋದರಳಿಯನೇ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.

ಮೃತರನ್ನು ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಕೇರಳದ ಕೌಂಡನೂರಿನ ನಿವಾಸಿ ಎನ್ನಲಾಗಿದೆ. ಈ ಘಟನೆ ಕೊಝಿಂಜಂಪರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಪೊಲೀಸರ ಪ್ರಕಾರ, ಸೆಂಥಿಲ್ ಕುಮಾರ್ ತಮ್ಮ ಸಹೋದರಿ ಹಾಗೂ ಆಕೆಯ ಮಗ ಪ್ರಭಾಕರನ್ ಜೊತೆ ವಾಸಿಸುತ್ತಿದ್ದರು. ಘಟನೆ ನಡೆದ ವೇಳೆ ಇಬ್ಬರೂ ಮದ್ಯ ಸೇವಿಸಿದ್ದರೆಂದು ತಿಳಿದುಬಂದಿದೆ. ಮನೆಯಲ್ಲೇ ತಯಾರಿಸಿದ ಕೋಳಿ ಲಿವರ್ ಅಉಗೆಯನ್ನು ಪ್ರಭಾಕರನ್ ಜೊತೆ ಹಂಚಿಕೊಳ್ಳದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ಆರಂಭಗೊಂಡಿದೆ.
ಜಗಳ ತೀವ್ರಗೊಂಡ ಬಳಿಕ ಆರೋಪಿಯಾದ ಪ್ರಭಾಕರನ್, ಕುಮಾರ್ ಅವರನ್ನು ಮನೆಯ ಹೊರಗಿನ ರಸ್ತೆಯಲ್ಲಿ ತಡೆದು ಬಿಳಿ ಬಣ್ಣದ ಪೈಪ್ ಬಳಸಿ ಹಲ್ಲೆ ನಡೆಸಿದ್ದಾನೆ. ತಲೆಯು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಕುಮಾರ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಬಳಿಕ ಆರೋಪಿ ಪ್ರಭಾಕರನ್ ಬೈಕ್ನಲ್ಲಿ ಪರಾರಿಯಾಗಿದ್ದು, ತಮಿಳುನಾಡಿನತ್ತ ಹೋಗಿದ್ದಾನೆ ಎಂದು ಶಂಕಿಸಲಾಗಿದೆ. ಕೇರಳ ಮತ್ತು ತಮಿಳುನಾಡು ಪೊಲೀಸರು ಸಂಯುಕ್ತವಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಪ್ರಕರಣ ಸಂಬಂಧ ಕೊಝಿಂಜಂಪರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.