ನವದೆಹಲಿ, ಏ. 21 (DaijiworldNews/TA): ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ದೃಢಸಂಕಲ್ಪ ಇದ್ದರೆ ಗುರಿ ಸಾಧಿಸಬಹುದು ಎಂಬುದಕ್ಕೆ ಮಹಾರಾಷ್ಟ್ರದ ಜಯಂತ್ ಮಂಕಾಳೆ ಜೀವಂತ ಉದಾಹರಣೆ. ಅಪರೂಪದ ಕಣ್ಣಿನ ಕಾಯಿಲೆಯಿಂದ 75% ದೃಷ್ಟಿ ಕಳೆದುಕೊಂಡರೂ, ಅವರು ಹಿಂಜರಿಯದೆ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 143ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಜಯಂತ್ ಮಂಕಾಳೆ ಅವರಿಗೆ ರೆಟಿನೈಟಿಸ್ ಪಿಗ್ಮೆಂಟೋಸಾ ಎಂಬ ಅಪರೂಪದ ಕಾಯಿಲೆ ಕಾಣಿಸಿಕೊಂಡು ಅವರ ಜೀವನವೇ ಬದಲಾಗಿದೆ. ಕೆಲವೇ ದಿನಗಳಲ್ಲಿ ದೃಷ್ಟಿಯ ಬಹುಪಾಲು ಕಳೆದುಕೊಂಡ ಅವರು, ಕತ್ತಲೆಯ ನಡುವೆಯೇ ತಮ್ಮ ಕನಸುಗಳನ್ನು ಬೆಳಗಿಸಿಕೊಂಡರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿರುವ ಜಯಂತ್, ಸಂಗಮ್ನೇರ್ನ ಅಮೃತವಾಹಿನಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 2015ರಲ್ಲಿ ಅವರ ಆರೋಗ್ಯ ಸಮಸ್ಯೆ ಗಂಭೀರಗೊಂಡು, ವೃತ್ತಿಜೀವನಕ್ಕೂ ಅಡ್ಡಿಯಾಯಿತು. ತಂದೆಯ ನಿಧನದ ನಂತರ ಕುಟುಂಬದ ಹೊರೆ ತಾಯಿ ಮತ್ತು ಸಹೋದರಿಯರ ಮೇಲಿದೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಅವರ ತಾಯಿ ಉಪ್ಪಿನಕಾಯಿ ಮಾರಾಟ ಮಾಡಿ ಶಿಕ್ಷಣಕ್ಕೆ ನೆರವಾದರು. ಸಹೋದರಿಯರು ತಮ್ಮ ಆಸೆಗಳನ್ನು ತ್ಯಜಿಸಿ ಜಯಂತ್ ಕನಸಿಗೆ ಬೆಂಬಲ ನಿಂತರು.
ಅಧ್ಯಯನಕ್ಕೆ ಅಗತ್ಯ ಸೌಲಭ್ಯಗಳ ಕೊರತೆಯಿದ್ದರೂ, ಜಯಂತ್ ತಮ್ಮದೇ ರೀತಿಯಲ್ಲಿ ಸಿದ್ಧತೆ ನಡೆಸಿದರು. ಆಲ್ ಇಂಡಿಯಾ ರೇಡಿಯೋ ಮೂಲಕ ಸುದ್ದಿಗಳನ್ನು ಕೇಳುವುದು, ಯೂಟ್ಯೂಬ್ ಉಪನ್ಯಾಸಗಳು ಹಾಗೂ ಲೋಕಸಭೆ–ರಾಜ್ಯಸಭೆ ಚರ್ಚೆಗಳ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಂಡರು. ದುಬಾರಿ ಸಾಧನಗಳಿಲ್ಲದೆ ಅವರು ತಮ್ಮ ಕನಸಿನತ್ತ ಹೆಜ್ಜೆ ಹಾಕಿದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು ಎರಡು ಬಾರಿ ಉತ್ತೀರ್ಣರಾಗಿದ್ದಾರೆ.
2018ರಲ್ಲಿ 923ನೇ ರ್ಯಾಂಕ್ ಪಡೆದರೂ ತೃಪ್ತಿ ಪಡದೆ, ಮತ್ತಷ್ಟು ಶ್ರಮಿಸಿ 2019ರಲ್ಲಿ 143ನೇ ರ್ಯಾಂಕ್ ಗಳಿಸಿದರು. ಇದರೊಂದಿಗೆ ಮಹಾರಾಷ್ಟ್ರದಿಂದ ಯುಪಿಎಸ್ಸಿ ಪಾಸಾದ ದೃಷ್ಟಿಹೀನ ಅಭ್ಯರ್ಥಿಗಳಲ್ಲಿ ಪ್ರಾಂಜಲ್ ಪಾಟೀಲ್ ನಂತರ ಎರಡನೇ ಸಾಧಕರಾಗಿ ಹೊರಹೊಮ್ಮಿದರು. “ನಾನು ದೃಷ್ಟಿಯನ್ನು ಕಳೆದುಕೊಂಡಿರಬಹುದು, ಆದರೆ ನನ್ನ ದೃಷ್ಟಿಕೋಣವನ್ನು ಕಳೆದುಕೊಳ್ಳಲಿಲ್ಲ” ಎಂಬ ಅವರ ಮಾತುಗಳು ಇಂದು ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿದೆ.