ಬೆಂಗಳೂರು, ಆ.21(Daijiworld News/SS): ದೂರವಾಣಿ ಕರೆ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ರಾಜ್ಯ ಸರಕಾರ ಅದರ ಬೆನ್ನಲ್ಲೇ ಬಹುಕೋಟಿ ವಂಚನೆಯ ಐಎಂಎ ಪ್ರಕರಣವನ್ನೂ ಕೇಂದ್ರ ತನಿಖಾ ದಳಕ್ಕೆ ವಹಿಸಿದೆ.
ಸೆಪ್ಟೆಂಬರ್ 12 ರೊಳಗೆ ಸಿಬಿಐ ತನಿಖಾ ಪ್ರಗತಿ ವರದಿ ನೀಡಬೇಕು ಎಂದು ಸಿಬಿಐಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.
ರಾಜ್ಯ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ಐಎಂಎ ಪ್ರಕರಣದ ಕುರಿತು ತನಿಖೆ ನಡೆಸುತ್ತಿತ್ತು. ಪ್ರಕರಣ ಕುರಿತು ಎಸ್ಐಟಿ ತನಿಖೆ ಪ್ರಗತಿ ವರದಿಯನ್ನು ರಾಜ್ಯ ಸರಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದೆ. ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐ ತನಿಖೆಗೆ ವಹಿಸಿರುವ ಕುರಿತು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಐಎಂಎ ಹಗರಣದಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಐಪಿಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವ ಕಾರಣ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ.
ಬಹುಕೋಟಿ ಐಎಂಎ ಹಗರಣದಲ್ಲಿ ಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 50 ಸಾವಿರ ಹೂಡಿಕೆದಾರರು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಐಎಂಎ ಸಂಸ್ಥೆಯಲ್ಲಿ ಹೊರ ರಾಜ್ಯ, ಹೊರ ದೇಶಗಳಲ್ಲಿ ವಾಸವಾಗಿರುವವರೂ ಹಣ ಹೂಡಿಕೆ ಮಾಡಿದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತ್ತು.