ಮಣಿಪುರ, ಏ. 21 (DaijiworldNews/TA): ಮಣಿಪುರದಲ್ಲಿ ಮಂಗಳವಾರ ಬೆಳಗಿನ ಜಾವ ಭೂಮಿ ಕಂಪಿಸಿದ ಪರಿಣಾಮ ಜನರಲ್ಲಿ ಆತಂಕ ಉಂಟಾಯಿತು. ಬೆಳಗ್ಗೆ ಸುಮಾರು 5.59ರ ವೇಳೆಗೆ 5.9 ತೀವ್ರತೆಯ ಈ ಭೂಕಂಪ ಸಂಭವಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಪ್ರಕಾರ, ಭೂಕಂಪವು ಭೂಮಿಯ 62 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ. ಕಾಮ್ಜಾಂಗ್ ಜಿಲ್ಲೆ ಪ್ರದೇಶದ ಜನರು ಗಾಢ ನಿದ್ರೆಯಲ್ಲಿದ್ದಾಗಲೇ ಭೂಮಿ ಜೋರಾಗಿ ಕಂಪಿಸಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಬಂದರು. ಸದ್ಯಕ್ಕೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿ ಇಲ್ಲದಿದ್ದರೂ, ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟಿದ್ದಾರೆ.
ಜಪಾನ್ನ ಉತ್ತರ ಕರಾವಳಿಯಲ್ಲೂ ಸೋಮವಾರ ಸಂಜೆ ಪ್ರಬಲ ಭೂಕಂಪ ಸಂಭವಿಸಿದೆ. ಸ್ಯಾನ್ರಿಕು ಕರಾವಳಿ ಸಮುದ್ರ ತಳದಲ್ಲಿ ಸಂಭವಿಸಿದ ಈ ಕಂಪನವು ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯನ್ನು ದಾಖಲು ಮಾಡಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಕುಜಿ ಬಂದರುನಲ್ಲಿ ಈಗಾಗಲೇ ಸುಮಾರು 80 ಸೆಂಟಿಮೀಟರ್ ಎತ್ತರದ ಅಲೆಗಳು ಅಪ್ಪಳಿಸಿದ್ದು, ಅಧಿಕಾರಿಗಳು 3 ಮೀಟರ್ವರೆಗೆ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಇವಾಟೆ ಪ್ರಾಂತ್ಯನ ಹಲವು ಭಾಗಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮಿಯಾಗಿ ಮತ್ತು ಫುಕುಶಿಮಾ ಪ್ರದೇಶಗಳಲ್ಲೂ ಜಾಗರೂಕರಾಗಿರಲು ಸೂಚಿಸಲಾಗಿದೆ.