ಚಾಮರಾಜನಗರ(ಗುಂಡ್ಲುಪೇಟೆ),ಏ. 21 (DaijiworldNews/AK): ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಯನ್ನು ಸದಾ ಬೆಂಬಲಿಸುತ್ತದೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಚಾಮರಾಜನಗರದ ಜೆಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿರೋಧಪಕ್ಷಗಳ ಅಪಪ್ರಚಾರ
ನಮ್ಮ ಸರ್ಕಾರದ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಆದಾಗ್ಯೂ ವಿರೋಧಪಕ್ಷಗಳು ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದೆ. ಆದರೆ ಜನರು ಇದರ ಸತ್ಯಾಸತ್ಯತೆಯನ್ನು ಅರಿಯಬೇಕು ಎಂದರು.
ಮಹಿಳಾ ಮೀಸಲಾತಿ ಅತ್ಯಗತ್ಯ
ಪ್ರಸ್ತುತ, ಮಹಿಳಾ ಮೀಸಲಾತಿ ಬಿಲ್ ಅನ್ನು ಕಾಂಗ್ರೆಸ್ ವಿರೋಧಿಸಿತು ಎಂದು ಬಿಜೆಪಿ ಸುಳ್ಳುಪ್ರಚಾರ ಮಾಡುತ್ತಿದೆ. ಆದರೆ ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಹಿಂದೆ ಸಂವಿಧಾನದ ಕಲಂ 73,74 ತಿದ್ದುಪಡಿಯನ್ನು ಬಿಜೆಪಿಯವರು ವಿರೋಧಿಸಿದ್ದರು. ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿಯನ್ನು ವಿರೋಧಿಸಿದವರನ್ನು ಮಹಿಳೆಯರು ಕ್ಷಮಿಸುವುದಿಲ್ಲ ಎಂದಿದ್ದಾರೆ.
ಆದರೆ 2023 ರಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆ ತರಲಾಗಿದ್ದು, ಈ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸದೇ ಸ್ವಾಗತಿಸಿದ್ದೆವು. ಆದರೆ ಸಹಮತಿ ಸೂಚಿಸಲಾಗಿದ್ದ ಮಹಿಳಾ ಮೀಸಲಾತಿಯನ್ನು 2028ರವರೆಗೆ ಜಾರಿಗೆ ತರಲು ಸಾಧ್ಯವಿಲ್ಲವೆಂದು ಬಿಜೆಪಿಯವರೇ ಹೇಳಿದರು. ಕಾಂಗ್ರೆಸ್ ಪಕ್ಷ ಎಂದಿಗೂ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತದೆ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದು, ಅವರಿಗೆ ನ್ಯಾಯಯುತವಾದ ಮೀಸಲಾತಿ ದೊರೆಯಬೇಕಿರುವುದು ಅತ್ಯಗತ್ಯ ಎಂದರು.
ಡಿಲಿಮಿಟೇಷನ್ ಕಾಯ್ದೆಗೆ ಕಾಂಗ್ರೆಸ್ ನ ವಿರೋಧವಿದೆ
ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತಿಗಳು, ನಗರಸಭೆ , ನಗರಪಾಲಿಕೆಗಳಲ್ಲಿ ಶೇ.50 ರಷ್ಟು ಮಹಿಳೆಯರಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಪ್ರಸ್ತುತ, ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಯ ಜೊತೆಗೆ ಡೀಲಿಮಿಟೇಷನ್ ಕಾಯ್ದೆ ತರಲು ಪ್ರಯತ್ನಿಸಿದ್ದರಿಂದ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್ ಡಿಲಿಮಿಟೇಷನ್ ಕಾಯ್ದೆ ಯನ್ನು ವಿರೋಧಿಸಿದೆಯೇ ಹೊರತು ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.