ನವದೆಹಲಿ,ಏ. 21 (DaijiworldNews/AK): ಸ್ವತಂತ್ರವಾಗಿ ಸ್ಪರ್ಧಿಸಿ ಬಿಹಾರದ ಸಂಸದರಾಗಿರುವ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ.

ಮಹಿಳೆಯರು ರಾಜಕೀಯಕ್ಕೆ ಬರುವುದು ಬಹಳ ಕಷ್ಟ. ಶೇ. 90ರಷ್ಟು ಮಹಿಳೆಯರು ಹಿರಿಯ ನಾಯಕರ ರೂಂನೊಳಗೆ ಹೋಗಿ ಅವರೊಂದಿಗೆ ಮಂಚ ಹಂಚಿಕೊಳ್ಳದೆ ರಾಜಕಾರಣಿಯಾಗಲು ಸಾಧ್ಯವಿಲ್ಲ. ಬಹುತೇಕ ಮಹಿಳೆಯರು ಹಿರಿಯ ರಾಜಕಾರಣಿಗಳೊಂದಿಗೆ ಲೈಂಗಿಕತೆಯ ರಾಜಿ ಮಾಡಿಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಪ್ಪು ಯಾದವ್ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಮಹಿಳೆಯರು ರಾಜಕೀಯ ಜೀವನವನ್ನು ಹೇಗೆ ಪ್ರವೇಶಿಸುತ್ತಾರೆ ಎಂಬುದರ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ಒಳಗೊಂಡಿರುವ ಈ ಹೇಳಿಕೆಗಳಿಗೆ ವಿವಿಧ ವಲಯಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಶೇ. 90ರಷ್ಟು ಮಹಿಳಾ ರಾಜಕಾರಣಿಗಳ ವೃತ್ತಿಜೀವನವು ಹಿರಿಯ ನಾಯಕರ ರೂಂನಿಂದ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮತ್ತು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸುವ ಸರ್ಕಾರದ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ ಕಳೆದ ಶುಕ್ರವಾರ ಲೋಕಸಭೆಯಲ್ಲಿ ಸೋತ ನಂತರ ಅವರ ಈ ಹೇಳಿಕೆ ಬಂದಿದೆ.
ರಾಜಕೀಯದಲ್ಲಿರುವ ಮಹಿಳೆಯರ ಬಗ್ಗೆ ಈ ರೀತಿ ಅವಮಾನಕರ ಹೇಳಿಕೆ ನೀಡಿದ್ದಕ್ಕಾಗಿ ಬಿಹಾರದ ರಾಜ್ಯ ಮಹಿಳಾ ಆಯೋಗವು ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ನೋಟಿಸ್ ನೀಡಿದೆ