ನವದೆಹಲಿ,ಏ. 22 (DaijiworldNews/TA): ಕಳೆದ ವರ್ಷ ಇದೇ ದಿನ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಮೊದಲ ವರ್ಷದ ಸ್ಮರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬಲಿಯಾದ ಮುಗ್ಧ ಜೀವಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಹಂಚಿಕೊಂಡಿರುವ ಅವರು, “ಕಳೆದ ವರ್ಷ ಈ ದಿನ ನಡೆದ ಪಹಲ್ಗಾಮ್ ದಾಳಿಯಲ್ಲಿ ಬಲಿಯಾದವರನ್ನು ನಾನು ಸ್ಮರಿಸುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಅಪಾರ ನಷ್ಟವನ್ನು ಎದುರಿಸುತ್ತಿರುವ ಕುಟುಂಬಗಳೊಂದಿಗೆ ನಾನು ಸದಾ ಇರುತ್ತೇನೆ” ಎಂದು ಹೇಳಿದ್ದಾರೆ.
ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಅವರು ತಿಳಿಸಿ, ಈ ದುಃಖದ ಕ್ಷಣದಲ್ಲಿ ರಾಷ್ಟ್ರವು ಒಂದಾಗಿ ನಿಂತಿದೆ ಎಂದು ಹೇಳಿದ್ದಾರೆ. ಈ ವೇಳೆ ಭಯೋತ್ಪಾದನೆಯನ್ನು ಪೋಷಿಸುವ ಶಕ್ತಿಗಳಿಗೆ ಕಠಿಣ ಎಚ್ಚರಿಕೆ ನೀಡಿದ ಪ್ರಧಾನಿ, “ಒಂದು ರಾಷ್ಟ್ರವಾಗಿ ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಏಕವಾಗಿದ್ದೇವೆ. ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ತಲೆಬಾಗುವುದಿಲ್ಲ” ಎಂದು ಘೋಷಿಸಿದ್ದಾರೆ.
ದಾಳಿಯ ನಂತರ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನೂ ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತಿದ್ದು, ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ದೇಶ ತನ್ನ ಪ್ರತಿಕ್ರಿಯೆಯನ್ನು ತೋರಿಸಿತ್ತು. ಪ್ರಧಾನಿ ಮೋದಿ ಅವರ ಈ ಹೇಳಿಕೆ, ಭದ್ರತಾ ವಿಚಾರದಲ್ಲಿ ಭಾರತದ ‘ಜೀರೋ ಟಾಲರೆನ್ಸ್’ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಪಹಲ್ಗಾಮ್ ದಾಳಿಯ ಗಾಯಗಳು ಇನ್ನೂ ಹಸಿಯಾಗಿದ್ದರೂ, ದೇಶದ ಏಕತೆ ಮತ್ತು ಆತ್ಮವಿಶ್ವಾಸ ಅಚಲವಾಗಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.