ತ್ರಿಶೂರ್, ಏ. 22 (DaijiworldNews/TA): ಪೂರಂ ಉತ್ಸವದ ಸಿದ್ಧತೆಗಳ ಸಮಯದಲ್ಲಿ ತಿರುವಂಬಾಡಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹದಿಮೂರು ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ 27 ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಪಘಾತದ ಸಮಯದಲ್ಲಿ ಸುಮಾರು 40 ಜನ ಆ ಸ್ಥಳದಲ್ಲಿದ್ದರು ಎಂಬ ಪ್ರಾಥಮಿಕ ಮಾಹಿತಿಯೊಂದು ಬಹಿರಂಗಗೊಂಡಿದೆ. ಹಬ್ಬಕ್ಕಾಗಿ ಪಟಾಕಿ ತಯಾರಿಸಲಾಗುತ್ತಿದ್ದ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.ಘಟನೆಯ ಬಳಿಕ ಅಗ್ನಿಶಾಮಕ ದಳ, ಪೊಲೀಸರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು.
ಆದರೆ ಸ್ಫೋಟದ ಬಳಿಕವೂ ಕೆಲವು ಸಮಯಗಳವರೆಗೆ ಸಣ್ಣ ಸ್ಫೋಟಗಳು ಮುಂದುವರಿದಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಯಿತು. ಇನ್ನೂ ಹಲವರು ಘಟಕದೊಳಗೆ ಸಿಲುಕಿರುವ ಸಾಧ್ಯತೆ ಇದ್ದು, ಅವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಹೆಚ್ಚು ತಾಪಮಾನ, ಸ್ಫೋಟಕ ವಸ್ತುಗಳ ಅಸಮರ್ಪಕ ಸಂಗ್ರಹಣೆ ಅಥವಾ ನಿರ್ಲಕ್ಷ್ಯವೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.